
ಪಿರಿಯಾಪಟ್ಟಣ: ‘ಶೇ 100ರಷ್ಟು ಫಲಿತಾಂಶವನ್ನು ಕಡ್ಡಾಯವಾಗಿ ಪಡೆಯುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಬೇಕು’ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೃಷ್ಣೇಗೌಡ ಹೇಳಿದರು.
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲ್ಲೂಕಿನ ವಿದ್ಯಾರ್ಥಿನಿಲಯಗಳಲ್ಲಿರುವ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಈಚೆಗೆ ಏರ್ಪಡಿಸಿದ್ದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಎಲ್ಲರೂ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಲಯ ವಿದ್ಯಾರ್ಥಿಗಳಿಗೆ ಎರಡು ಜೊತೆ ಬಟ್ಟೆ, ಪ್ರತಿ ತಿಂಗಳು ಶುಚಿ ಸಂಭ್ರಮ ಕಿಟ್, ಹಾಸಿಗೆ ಹೊದಿಕೆಗಳು, ನೋಟ್ ಬುಕ್ಸ್, ಅರೆಕಾಲಿಕ ಬೋಧಕರಿಂದ ರಾತ್ರಿ ಪಾಠ, ವಾರಕ್ಕೆ ಮೂರು ದಿನ ಮೊಟ್ಟೆ, ಬಾಳೆಹಣ್ಣು, ಪ್ರತಿ ಮಂಗಳವಾರ ಚಿಕನ್ ಊಟ ನೀಡಲಾಗುತ್ತಿದೆ’ ಎಂದರು.
‘ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ, ವಿದ್ಯಾರ್ಥಿನಿಲಯಕ್ಕೆ, ಓದಿದ ಶಾಲೆಗೆ, ನಿಮ್ಮ ಪೋಷಕರಿಗೆ ಒಳ್ಳೆಯ ಹೆಸರನ್ನು ತರಬೇಕು’ ಎಂದು ತಿಳಿಸಿದರು.
ಎಸ್‌ಕೆಎಸ್‌ಟಿ ಪ್ರೌಢಶಾಲೆ ಗಣಿತ ಶಿಕ್ಷಕ ಲೋಕೇಶ್, ಮಾನಸ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕ ತ್ಯಾಗರಾಜ ಅವರು ತರಗತಿ ನಡೆಸಿಕೊಟ್ಟರು. ಎರಡನೇ ದಿನ ಇಂಗ್ಲಿಷ್ ಶಿಕ್ಷಕ ರಾಘವೇಂದ್ರ ಉಡುಪ ಕಾರ್ಯಗಾರ ನಡೆಸಿಕೊಟ್ಟರು.
ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕ ದಶರಥ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.