ADVERTISEMENT

ಮೈಮುಲ್‌ ನೇಮಕಾತಿ | ಬ್ಲಾಕ್‌ಮೇಲ್‌ಗೆ ಹೆದರಲ್ಲ, ನೇಮಕಾತಿ ರದ್ದು ಪಡಿಸಲ್ಲ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:36 IST
Last Updated 21 ಮೇ 2020, 14:36 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಮೈಸೂರು: ‘ಮೈಮುಲ್‌ನಲ್ಲಿ ಇದೀಗ ನಡೆದಿರುವ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲ್ಲ. ಯಾರೊಬ್ಬರ ಬ್ಲಾಕ್‌ಮೇಲ್‌ಗೂ ಹೆದರಲ್ಲ. ಶಾಸಕ ಸಾ.ರಾ.ಮಹೇಶ್‌ ತಮ್ಮ ಬಳಿಯಿರುವ ದಾಖಲಾತಿಗಳನ್ನು ಸಾರ್ವಜನಿಕರ ಮುಂದಿಡಲಿ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಗುರುವಾರ ಇಲ್ಲಿ ಸವಾಲು ಹಾಕಿದರು.

‘ನೇಮಕಾತಿಯಲ್ಲಿ ಅರ್ಹರಿಗೆ ಅನ್ಯಾಯ ಆಗಿದ್ದರೆ, ಸರಿಪಡಿಸುವ ಹೊಣೆ ನಮ್ಮದು. ಹಾವಿನ ಬುಟ್ಟಿಯಲ್ಲಿ ಹಾವಿಲ್ಲದಿದ್ದರೂ, ಹಾವಿದೆ ಎನ್ನುತ್ತಿದ್ದಾರೆ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಪ್ರತಿಕ್ರಿಯಿಸಿದರು.

‘6 ತಿಂಗಳಿನಿಂದ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇಲಾಖೆ ತನಿಖೆ ನಡೆಸುತ್ತಿದೆ. ವರದಿ ಬರಲಿ. ನಂತರ ನೋಡೋಣ. ಅಕ್ರಮ ನಡೆದಿದ್ದರೇ ಕ್ರಮ ಜರುಗಿಸೋಣ. ಇವರನ್ನು ಕೇಳಿ ತನಿಖೆ ನಡೆಸಬೇಕಿಲ್ಲ. ಮೊದಲು ಇಲಾಖೆಯ ವಿಚಾರಣೆ ಮುಗಿಯಲಿ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ADVERTISEMENT

‘ಪ್ರತಿಭಟನೆ ಅವರ ಹಕ್ಕು. ಪ್ರತಿಭಟಿಸಬೇಡಿ ಎಂದು ಹೇಳಲು ನಾವ್ಯಾರು. ಅವರು ಸಚಿವರಾಗಿದ್ದಾಗಲೇ ಮಂಜೂರಾಗಿದ್ದ ಹುದ್ದೆಗಳು. ಇದೀಗ ನೇಮಕಾತಿ ನಡೆಯದಿದ್ದರೇ, ಒಕ್ಕೂಟದ ಕಾರ್ಯ ನಿರ್ವಹಣೆಗೆ ತೊಂದರೆಯಾಗಲಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಲಿದ್ದಾರೆ’ ಎಂದು ಸಚಿವರು ಹೇಳಿದರು.

ಲಿಖಿತವಾಗಿ ಕೊಡಲಿ: ‘ಮಾಜಿ ಸಂಸದ ಆರ್.ಧ್ರುವನಾರಾಯಣ್‌ ನಂಜನಗೂಡಿನ ಔಷಧಿ ಕಂಪನಿಯವರು ಸರ್ಕಾರಕ್ಕೆ ಕಿಕ್‌ ಬ್ಯಾಕ್ ನೀಡಿದ್ದನ್ನು ನೋಡಿರಬಹುದು. ಅಥವಾ ಅವರಿಗೆ ಕಿಕ್‌ ಬ್ಯಾಕ್ ಸಿಗದಿರುವುದಕ್ಕೆ ಆರೋಪಿಸುತ್ತಿರಬಹುದು’ ಎಂದು ಸೋಮಶೇಖರ್ ತಿರುಗೇಟು ನೀಡಿದರು.

‘ಕೊರೊನಾ ಸೋಂಕು ತಗುಲಿದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದರೇ, ಯಾವ್ಯಾವ ಕಾರಣಕ್ಕಾಗಿ ಎಂಬುದನ್ನು ನಮೂದಿಸಿ ಧ್ರುವನಾರಾಯಣ್ ಲಿಖಿತವಾಗಿ ದೂರು ನೀಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಎಲ್ಲದರಲ್ಲೂ ಮೂಗು ತೂರಿಸಲು ನಾನು ಸಾ.ರಾ.ಮಹೇಶ್ ಅಲ್ಲ’

‘ಮೈಮುಲ್‌ನಲ್ಲಿ ಏನು ನಡೆದಿದೆ ಎಂಬುದು ಎಲ್ಲವೂ ಶಾಸಕ ಸಾ.ರಾ.ಮಹೇಶ್‌ಗೆ ಗೊತ್ತು. ಅವನಿಗಿರುವಷ್ಟು ಬುದ್ದಿವಂತಿಕೆ ನನಗಿಲ್ಲ’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸ್ವಪಕ್ಷೀಯ ಶಾಸಕರಿಗೆ ತಿರುಗೇಟು ನೀಡಿದರು.

‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಅವರವರ ಕೆಲಸ ಮಾಡಲು ನಾನು ಅವಕಾಶ ಕೊಟ್ಟಿದ್ದೇನೆ. ಸಾ.ರಾ.ಮಹೇಶ್‌ನಂತೆ ಎಲ್ಲದರಲ್ಲೂ ಮೂಗು ತೂರಿಸಲ್ಲ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಲೇವಡಿ ಮಾಡಿದರು.

‘ಮೈಮುಲ್, ಡಿಸಿಸಿ ಬ್ಯಾಂಕ್ ಸ್ವಾಯತ್ತ ಸಂಸ್ಥೆಗಳು. ಇವುಗಳ ನಿರ್ವಹಣೆಗೆ ಸರ್ಕಾರವಿದೆ. ಅಲ್ಲಿ ನಮ್ಮದೇನು ಕೆಲಸ. ಸಾ.ರಾ.ಮಹೇಶ್‌ ಏನು ಕೆಲಸ ಮಾಡುತ್ತಾನೆ ಅಂತ ಎಲ್ಲರಿಗೂ ಗೊತ್ತು. ನಾನ್ಯಾಕೆ ಇವುಗಳ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲಿ’ ಎಂದು ಜಿ.ಟಿ.ದೇವೇಗೌಡ ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.