ಹುಣಸೂರು: ಸಿಮೆಂಟ್ ಆಸನದ ಮೇಲೆ ಬೆಳೆದಿರುವ ಹುಲ್ಲು, ಒಳಾಂಗಣದಲ್ಲಿ ಜೋತು ಬಿದ್ದಿರುವ ಫ್ಯಾನ್‌ಗಳು, ಬೆಳಗದ ವಿದ್ಯುತ್ ದೀಪ...
ಇದು ನಗರದಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣದ ನೋಟ. ಕ್ರೀಡಾಂಗಣ ಕಾಮಗಾರಿ ಮುಗಿದು 2 ವರ್ಷ ಕಳೆದರೂ, ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾಗಿದೆ. ಮೂಲ ಸೌಲಭ್ಯ ಕೊರತೆಯಿಂದ ನನೆಗುದಿಗೆ ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2016–17ರಲ್ಲಿ ₹ 2 ಕೋಟಿ ಅನುದಾನದಲ್ಲಿ ಜಿಮ್ನಾಷಿಯಂ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಆರಂಭವಾಗಿ 2019–20ರಲ್ಲಿ ಪೂರ್ಣಗೊಂಡಿದ್ದರೂ ಸಾರ್ವಜನಿಕರ ಬಳಕೆಗೆ ಇಂದಿಗೂ ಮುಕ್ತವಾಗಿಲ್ಲ.
ಬ್ಯಾಡ್ಮಿಂಟನ್ ಆಡುವ ಯುವಕರು ಗಲ್ಲಿಗಳಲ್ಲಿ ಅಥವಾ ಖಾಸಗಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಲ್ಕು ಪಾವತಿಸಿ ಆಟವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಈ ಸಂಬಂಧ ಮೌನವಾಗಿದ್ದು, ಒಳಾಂಗಣ ಕ್ರೀಡಾಂಗಣ ಇದ್ದು ಇಲ್ಲವಾಗಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾದ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. 60ರಿಂದ 70 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಯುವಕರಿಗೆ ಸೌಲಭ್ಯ ವಂಚಿತವಾಗಿದೆ.
‘ಒಳಾಂಗಣ ಕ್ರೀಡಾಂಗಣದಲ್ಲಿ ಜಿಮ್ನಾಷಿಯಂ ಮತ್ತು ಶಟಲ್ ಬ್ಯಾಡ್ಮಿಂಟನ್ ಮೂರು ಕೋರ್ಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಕ್ರೀಡಾಪಟುಗಳು ಉಳಿದುಕೊಳ್ಳಲು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಕ್ರೀಡಾ ತರಬೇತುದಾರರಿಗೆ ಕೊಠಡಿ ಮತ್ತು ವಿಶ್ರಾಂತಿ ಕೊಠಡಿ ನಿರ್ಮಿಸಿದ್ದು, ಶಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗೆ ಮರದ ನೆಲಹಾಸು ಕಾಮಗಾರಿ ಬಾಕಿ ಇದೆ’ ಎಂದು ಕ್ರೀಡಾಂಗಣ ನಿರ್ಮಾಣದ ಜವಾಬ್ದಾರಿ ಹೊತ್ತ ನಿರ್ಮಿತಿ ಕೇಂದ್ರದ ಎಂಜಿನಿಯರ್ ರಕ್ಷಿತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ರಾಜ್ಯ ಕ್ರೀಡಾ ಆಯುಕ್ತ ಚೇತನ್ ಈಚೆಗೆ ಕ್ರೀಡಾಂಗಣ ವೀಕ್ಷಿಸಿ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಕೆಲವೊಂದು ಸುಧಾರಣೆಗೆ ಸೂಚಿಸಿ ಡಿ.ಪಿ.ಆರ್ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು. ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಮರದ ನೆಲ ಹಾಸಿಗೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಶೀಘ್ರ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದರು.
ಮರದ ನೆಲಹಾಸು ಕಾಮಗಾರಿ ಬಾಕಿ ಸಿಮೆಂಟ್ ಆಸನಗಳ ಮೇಲೆ ಹುಲ್ಲು ಜೋತುಬಿದ್ದ ಫ್ಯಾನ್‌ಗಳು: ಸಾರ್ವಜನಿಕರ ಆಕ್ರೋಶ
- ‘ದುಬಾರಿ ಶುಲ್ಕ ಪಾವತಿಸುವ ಅನಿವಾರ್ಯ’ ನಗರದಲ್ಲಿ ಖಾಸಗಿ ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಇದ್ದು ದುಬಾರಿ ಶುಲ್ಕ ಪಾವತಿಸಿ ಆಟವಾಡಬೇಕಾಗಿದೆ. ಇದರಿಂದ ಆರ್ಥಿಕ ಹೊರೆ ಆಗುತ್ತಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಒಳಕ್ರೀಡಾಂಗಣ ಪೂರ್ಣಗೊಳಿಸಿ ಅವಕಾಶ ಕಲ್ಪಿಸಲಿ. ವಿಶ್ವನಾಥ್ ನಗರ ನಿವಾಸಿ ‘ತ್ವರಿತವಾಗಿ ಕ್ರೀಡಾಂಗಣ ತೆರೆಯಲಿ’ ನಗರದಲ್ಲಿ ಕ್ರೀಡಾಂಗಣದ ಕೊರತೆ ಯುವಕರಲ್ಲಿ ಆಸಕ್ತಿ ಕಮರಿಸಿದೆ. ಸರ್ಕಾರ ಕ್ರೀಡಾ ಮೈದಾನ ಅವೈಜ್ಞಾನಿಕವಾಗಿ ನಿರ್ಮಿಸಿ ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಾಗಿದ್ದು ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕ್ರೀಡಾಪಟುಗಳಿಗೆ ತ್ವರಿತವಾಗಿ ಲಭ್ಯವಾಗುವಂತಾಗಲಿ. ಕಾರ್ತಿಕ್ ಕ್ರೀಡಾ ತರಬೇತುದಾರರು. ‘ಅನುದಾನಕ್ಕೆ ಸರ್ಕಾರದ ಗಮನ’ ‘ಒಳಾಂಗಣ ಕ್ರೀಡಾಂಗಣ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸುವ ಸಂಬಂಧ ಈಗಾಗಲೇ ಕ್ರೀಡಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗೆ ಮರದ ನೆಲಹಾಸು ಸೇರಿದಂತೆ ಜಿಮ್ನಾಷಿಯಂಗೆ ಬೇಕಾಗುವ ಪರಿಕರ ಸಾಧನ ಖರೀದಿಗೆ ಅನುದಾನಕ್ಕೆ ಸರ್ಕಾರದ ಗಮನ ಸೆಳೆದಿದ್ದೇನೆ’. ಜಿ.ಡಿ.ಹರೀಶ್ ಗೌಡ ಶಾಸಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.