ADVERTISEMENT

ಮೈಸೂರು: ದೇಶದಲ್ಲಿ ಕಾರ್ಮಿಕರ ಸ್ಥಿತಿ ಅಧೋಗತಿ -ಪುಟ್ಟಸ್ವಾಮಿಗೌಡ ಆಕ್ರೋಶ

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 4:48 IST
Last Updated 29 ಜುಲೈ 2021, 4:48 IST
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಚ್.ಕೆ.ಮಂಜುನಾಥ್ ಅಧಿಕಾರ ವಹಿಸಿಕೊಂಡರು. ಆರ್‌.ಧ್ರುವನಾರಾಯಣ, ಪುಟ್ಟಸ್ವಾಮಿಗೌಡ, ಬಿ.ಜೆ.ವಿಜಯಕುಮಾರ್, ಕೆ.ಮರೀಗೌಡ, ಕಳಲೆ ಕೇಶವಮೂರ್ತಿ, ರವಿಶಂಕರ್‌ ಇದ್ದಾರೆ
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಎಚ್.ಕೆ.ಮಂಜುನಾಥ್ ಅಧಿಕಾರ ವಹಿಸಿಕೊಂಡರು. ಆರ್‌.ಧ್ರುವನಾರಾಯಣ, ಪುಟ್ಟಸ್ವಾಮಿಗೌಡ, ಬಿ.ಜೆ.ವಿಜಯಕುಮಾರ್, ಕೆ.ಮರೀಗೌಡ, ಕಳಲೆ ಕೇಶವಮೂರ್ತಿ, ರವಿಶಂಕರ್‌ ಇದ್ದಾರೆ   

ಮೈಸೂರು: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಮಿಕರ ಸ್ಥಿತಿ ಅಧೋಗತಿಗೆ ತಲುಪಿದೆ’ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ವತಿಯಿಂದ ಬುಧವಾರ ನಡೆದ ಶ್ರಮಿಕ ಸಮ್ಮೇಳನ ಹಾಗೂ ಕಾರ್ಯಕಾರಿಣಿಯಲ್ಲಿ ಮಾತನಾಡಿ, ‘ಜನರ ಭಾವನೆಗಳನ್ನು ಕೆರಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಚುನಾವಣೆ ಅವಧಿಯಲ್ಲಿ ನೀಡಿದ್ದ ಯಾವುದೇ ಭರವಸೆಯನ್ನೂ ಈಡೇರಿಸಿಲ್ಲ. ರಾಮ, ಸೀತೆ, ಆಂಜನೇಯ, ಮುಸ್ಲಿಮರು, ಪಾಕಿಸ್ತಾನ ಬಿಟ್ಟರೆ ಅವರಿಗೆ ಬೇರೆ ಯಾವುದೇ ವಿಚಾರವೂ ಬೇಡ’ ಎಂದು ಹರಿಹಾಯ್ದರು.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 14 ಲಕ್ಷ ಕಾರ್ಖಾನೆಗಳು ಮುಚ್ಚಿದ್ದು, 18 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸುಮಾರು 22 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಬಿಜೆಪಿಯ ಗೊತ್ತುಗುರಿಯಿಲ್ಲದ ಆರ್ಥಿಕ ನೀತಿಯೇ ಇದಕ್ಕೆ ಕಾರಣ’ ಎಂದು ದೂರಿದರು.

ADVERTISEMENT

‘ಎಸ್‌.ಆರ್‌. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾರ್ಮಿಕ ವಿರೋಧಿ ನೀತಿಗಳನ್ನು ತೆಗೆದುಕೊಂಡಿದ್ದಾಗ ಅದರ ವಿರುದ್ಧ ನಾನು ಹೋರಾಟ ಮಾಡಿದ್ದೆ. ನೀವು ಅಂತಹ ನೀತಿ ಜಾರಿಗೆ ತಂದರೆ, ಪ್ರಬಲವಾಗಿ ವಿರೋಧಿಸುತ್ತೇವೆ’ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಚ್ಚರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ. ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗೀಕರಣ ಗೊಳಿಸುತ್ತಿದೆ. ಇದರಿಂದ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ದೂರಿದರು.

ಅಧಿಕಾರ ಸ್ವೀಕಾರ: ಕಾರ್ಯಕ್ರಮದಲ್ಲಿ ಎಚ್‌.ಕೆ.ಮಂಜುನಾಥ್‌ ಅವರು ಮೈಸೂರು ಜಿಲ್ಲಾ ಕಾರ್ಮಿಕ ವಿಭಾಗದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಫಲಾನುಭವಿಗಳಿಗೆ ಕಾರ್ಮಿಕ ಕಾರ್ಡ್‌ ವಿತರಿಸಲಾಯಿತು.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಹರಿಣಿ ಗೌಡ, ಮಾವಿನಹಳ್ಳಿ ರವಿ, ಅಕ್ಬರ್ ಆಲಿ, ಮಾರುತಿ, ಎಡತಲೆ ಮಂಜುನಾಥ್, ಗಿರೀಶ್, ಶಿವಪ್ರಸಾದ್, ಉತ್ತನಳ್ಳಿ ಶಿವಣ್ಣ, ಯೋಗೇಶ್, ನಾಗರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.