ADVERTISEMENT

ಮೈಸೂರು | ಕಳವು ಪ್ರಕರಣ: ₹ 63 ಲಕ್ಷ ಮೌಲ್ಯದ ವಸ್ತುಗಳು ಪತ್ತೆ; 19 ಆರೋಪಿಗಳ ಬಂಧನ

659 ಗ್ರಾಂ. ಚಿನ್ನಾಭರಣ ವಶಕ್ಕೆ– ಸೀಮಾ ಲಾಟ್ಕರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 3:16 IST
Last Updated 15 ಜುಲೈ 2025, 3:16 IST
ಕಳವಾಗಿದ್ದ ಚಿನ್ನಾಭರಣಗಳನ್ನು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮೈಸೂರಿನ ಕಚೇರಿಯ ಆವರಣದಲ್ಲಿ ವೀಕ್ಷಿಸಿದರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎನ್.ಸುಂದರ್ ರಾಜ್ ಹಾಜರಿದ್ದರು –ಪ್ರಜಾವಾಣಿ ಚಿತ್ರ  
ಕಳವಾಗಿದ್ದ ಚಿನ್ನಾಭರಣಗಳನ್ನು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮೈಸೂರಿನ ಕಚೇರಿಯ ಆವರಣದಲ್ಲಿ ವೀಕ್ಷಿಸಿದರು. ಡಿಸಿಪಿಗಳಾದ ಆರ್.ಎನ್.ಬಿಂದುಮಣಿ, ಕೆ.ಎನ್.ಸುಂದರ್ ರಾಜ್ ಹಾಜರಿದ್ದರು –ಪ್ರಜಾವಾಣಿ ಚಿತ್ರ     

ಮೈಸೂರು: ‘ಎರಡು ತಿಂಗಳಲ್ಲಿ 42 ಕಳವು ಪ್ರಕರಣಗಳನ್ನು ನಗರ ಅಪರಾಧ ಪತ್ತೆ ವಿಭಾಗದ (ಸಿಸಿಬಿ) ಪೊಲೀಸರು ಭೇದಿಸಿದ್ದು, ₹ 63 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ, ಕಾರು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘8 ಸರಗಳವು, 28 ವಾಹನ ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, 659 ಗ್ರಾಂ ಚಿನ್ನ, 1 ಕೆ.ಜಿ ಬೆಳ್ಳಿ, 27 ದ್ವಿಚಕ್ರ ವಾಹನ, 1 ಕಾರು ಹಾಗೂ ₹ 2.57 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. 19 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

‘ಸರಸ್ವತಿಪುರಂ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಮರಗೆಲಸ ಮಾಡಲು ಬಂದಿದ್ದ ವ್ಯಕ್ತಿಯು, ಮಾಲೀಕರು ಇಲ್ಲದಿದ್ದಾಗ ಗೋದ್ರೋಜ್ ಲಾಕರ್‌ ಅನ್ನು ಆನ್‌ಲೈನ್‌ ವಿಡಿಯೊ ನೋಡಿ, ತೆರೆದು ಅನುಮಾನ ಬಾರದಂತೆ ಅರ್ಧ ಚಿನ್ನವನ್ನು ಹಾಗೇ ಇಟ್ಟು 280 ಗ್ರಾಂ ಚಿನ್ನಾಭರಣ ಕದ್ದಿದ್ದನು. ಅದರ ಮೌಲ್ಯ ₹ 26.16 ಲಕ್ಷವಾಗಿದ್ದು, ತಮಿಳುನಾಡಿನಲ್ಲಿ ಸ್ವತ್ತು ಹಾಗೂ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು’ ಎಂದು ತಿಳಿಸಿದರು. 

ADVERTISEMENT

‘9 ಸರಗಳವು ಪ್ರಕರಣಗಳಲ್ಲಿ 8 ಅನ್ನು ಭೇದಿಸಲಾಗಿದ್ದು, ಲಷ್ಕರ್, ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯ ತಲಾ 3 ಹಾಗೂ ಕುವೆಂಪುನಗರ, ದೇವರಾಜ ಠಾಣೆಯ 1 ಪ್ರಕರಣಗಳಲ್ಲಿ 260 ಗ್ರಾಂನ 7 ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಯಿತು. ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅದರಲ್ಲಿ ವಿದ್ಯಾರಣ್ಯಪುರಂ ಠಾಣೆಯ ಒಂದು ಪ್ರಕರಣದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕನು’ ಎಂದು ವಿವರಿಸಿದರು. 

‘ಲಷ್ಕರ್ ಠಾಣೆ ವ್ಯಾಪ್ತಿಯ ಬಸ್‌ ನಿಲ್ದಾಣದಲ್ಲಿ ನಡೆದಿದ್ದ ಸರಗಳವು ಪ್ರಕರಣಗಳನ್ನು ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಕಾರ್ಯಾಚರಣೆ ನಡೆಸಿ, 50 ಅನುಮಾನಿತರಲ್ಲಿ ತಮಿಳುನಾಡು ಮೂಲದ ದಂಪತಿಯಿಬ್ಬರನ್ನು ಗುರುತಿಸಿ ಬಂಧಿಸಲಾಗಿದೆ’ ಎಂದರು.  

‍ಪ್ರಕರಣಗಳನ್ನು ಭೇದಿಸಿದ ಸರಸ್ವತಿಪುರಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಪುರುಷೋತ್ತಮ್, ದೇವರಾಜದ ರಘು, ಲಷ್ಕರ್‌ನ ಪ್ರಸಾದ್‌, ಸಿಸಿಬಿಯ ಮೋಹಿತ್‌, ಗೋಪಾಲ್‌ ಸೇರಿದಂತೆ ಎಲ್ಲ ತಂಡದವರನ್ನು ಇದೇ ವೇಳೆ ಅಭಿನಂದಿಸಿದರು. 

ಡಿಸಿಪಿಗಳಾದ ಕೆ.ಎನ್. ಸುಂದರ್ ರಾಜ್, ಆರ್.ಎನ್.ಬಿಂದುಮಣಿ ಪಾಲ್ಗೊಂಡಿದ್ದರು. 

42 ಕಳವು ಪ್ರಕರಣ ಭೇದಿಸಿದ ಪೊಲೀಸರು 27 ದ್ವಿಚಕ್ರ ವಾಹನ, 1 ಕಾರು ವಶಕ್ಕೆ  2 ತಿಂಗಳಲ್ಲಿ ಸಿಸಿಬಿ ಪೊಲೀಸರ ಸಾಧನೆ

₹ 18.5 ಲಕ್ಷ ಮೌಲ್ಯದ ಗಾಂಜಾ ವಶ ‘65.8 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು 13 ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಈ ಮೊದಲಿನ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ’ ಎಂದು ಸೀಮಾ ಹೇಳಿದರು.  ‘ಗಾಂಜಾದ ಮೌಲ್ಯ ₹ 18.5 ಲಕ್ಷ ಆಗಿದ್ದು 23 ಗ್ರಾಂ ಎಂಡಿಎಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪೂರೈಸುವವರು ಹಾಗೂ ಪಡೆಯುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಾಸ್ಟರ್ ಕೀ ಬಳಸಿ ಬೈಕ್ ಕಳವು’  ‘7 ಮಾಸ್ಟರ್‌ ಕೀಗಳನ್ನು ಬಳಸಿ 24 ಹೋಂಡಾ ಆ್ಯಕ್ಟೀವಾ ಬೈಕ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಚಾಮರಾಜನಗರದಲ್ಲಿ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೈಕ್‌ಗಳ ಮೌಲ್ಯ ₹ 12.8 ಲಕ್ಷವಾಗಿದ್ದು ಬಹಳ ಹೊತ್ತು ನಿಲ್ಲಿಸಿದ್ದ ಗಾಡಿಗಳನ್ನು ಕದ್ದು ₹ 7 ಸಾವಿರಕ್ಕೆ ಆರೋಪಿಯು ಮಾರುತ್ತಿದ್ದ’ ಎಂದು ಸೀಮಾ ಹೇಳಿದರು.  ‘ದಾಖಲೆಗಳನ್ನು ನಂತರ ಕೊಡುವುದಾಗಿ ಹೇಳಿದ್ದ ಈತ ಅಡುಗೆ ಕೆಲಸ ಮಾಡುತ್ತಿದ್ದ. ದೇವರಾಜ ಠಾಣೆಯ 21 ಲಷ್ಕರ್ ಉದಯಗಿರಿ ಗುಂಡ್ಲುಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ತಲಾ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ 2 ದ್ವಿಚಕ್ರ ವಾಹನ ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.