ADVERTISEMENT

ಪುತ್ರ ಮನೆ ಬಿಟ್ಟು ಕೊಡದ್ದಕ್ಕೆ ನೇಣಿಗೆ ಶರಣಾದ ತಂದೆ!

ಪ್ರತ್ಯೇಕ ಪ್ರಕರಣ; ಇಬ್ಬರು ಆತ್ಮಹತ್ಯೆ, ಪತಿ ಮುನಿಸಿಗೆ ಜೀವತೆತ್ತ ಪತ್ನಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 11:29 IST
Last Updated 22 ಮಾರ್ಚ್ 2019, 11:29 IST

ಮೈಸೂರು: ನಗರದಲ್ಲಿ ಗುರುವಾರ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳವಾಡಿಯ ನಿವಾಸಿ ನರಸೇಗೌಡ (70) ಪುತ್ರನ ಮೇಲಿನ ಸಿಟ್ಟಿಗೆ ಆತ್ಮಹತ್ಯೆ ಮಾಡಿಕೊಂಡರೆ ಕುವೆಂಪುನಗರದ ನಿವಾಸಿ ಅರ್ಚನಾ (33) ಪತಿ ಕೋಪಿಸಿಕೊಂಡಿದ್ದಕ್ಕೆ ನೇಣಿಗೆ ಶರಣಾಗಿದ್ದಾರೆ.

ಘಟನೆಗಳ ವಿವರ:

ನರಸೇಗೌಡ ಅವರು ಇಲ್ಲಿನ ಬೆಳವಾಡಿಯಲ್ಲಿ ವಾಸವಿದ್ದರು. ಇವರ ಪತ್ನಿ ಎರಡು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಇವರಿಗೆ ಮೂವರು ಪುತ್ರರು ಇದ್ದಾರೆ. ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರಲ್ಲಿ ಒಬ್ಬ ಪುತ್ರ ವಾಸಿಸುತ್ತಿದ್ದ ಮನೆಯನ್ನು ತನಗೆ ಬಿಟ್ಟುಕೊಡಬೇಕು. ‘ಅದನ್ನು ಬಾಡಿಗೆಗೆ ನೀಡಿ ನಾನು ಜೀವನ ಮಾಡುತ್ತೇನೆ’ ಎಂದು ನರಸೇಗೌಡ ಕೇಳಿಕೊಂಡರು. ಆದರೆ, ಪುತ್ರ ಒಪ್ಪಲಿಲ್ಲ. ಈ ಕುರಿತು ಗ್ರಾಮದಲ್ಲಿ ರಾಜಿ ಪಂಚಾಯಿತಿ ಸಹ ನಡೆದಿತ್ತು. ಇದರಿಂದ ಬೇಸರಗೊಂಡ ನರಸೇಗೌಡ ಪುತ್ರನಿಗೆ ಸೇರಿದ ಮನೆಯ ಬೀಗ ಒಡೆದು ಒಳನುಗ್ಗಿ ನೇಣು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ಪತಿ ಕೋಪಿಸಿಕೊಂಡಿದ್ದಕ್ಕೆ ಆತ್ಮಹತ್ಯೆ:

ಇಲ್ಲಿನ ಕುವೆಂಪುನಗರದ ‘ಐ’ ಬ್ಲಾಕ್‌ನ ಅನಿಕೇತನ ರಸ್ತೆಯಲ್ಲಿ ವಾಸವಿರುವ ಅರ್ಚನಾ (33) ತನ್ನ ಪತಿ ಮಹೇಶ್ ಕೋಪಿಸಿಕೊಂಡಿದ್ದಕ್ಕೆ ಆತ್ಮಹತ್ಮೆ ಮಾಡಿಕೊಂಡಿದ್ದಾರೆ.

ಕಳೆದ 10 ವರ್ಷದ ಹಿಂದೆ ಅರ್ಚನಾ ಅವರು ಮಹೇಶ್ ಅವರನ್ನು ವಿವಾಹವಾಗಿದ್ದರು. ಇವರಿಗೆ 9 ವರ್ಷದ ಮಗಳಿದ್ದಾಳೆ. ಸಣ್ಣಪುಟ್ಟ ವಿಚಾರಗಳಿಗೆ ಅರ್ಚನಾ ಹೆಚ್ಚು ಕೋಪಿಸಿಕೊಳ್ಳುತ್ತಿದ್ದರು. ಬುಧವಾರ ಬೆಳಿಗ್ಗೆ ನಂಜನಗೂಡಿಗೆ ಹೊರಟಿದ್ದ ಮಹೇಶ್ ತಿಂಡಿ ಮಾಡದೇ ಇರುವುದಕ್ಕೆ ಪತ್ನಿ ಮೇಲೆ ಕೋಪಿಸಿಕೊಂಡಿದ್ದಾರೆ. ನಂತರ, ಇವರು ರಾತ್ರಿ ಬಂದಾಗಲೂ ಇಬ್ಬರ ಮಧ್ಯೆ ಮಾತುಕತೆ ನಡೆದಿಲ್ಲ. ಆದರೆ, ತಡರಾತ್ರಿ ಮನೆಯಲ್ಲಿ ಅರ್ಚನಾ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.