
ಮೈಸೂರು: ‘ಸಂಸದ ಪ್ರಜ್ವಲ್ ರೇವಣ್ಣ ನಡೆಸಿದ ಲೈಂಗಿಕ ದೌರ್ಜನ್ಯ ವಿರೋಧಿಸಿ, ಸಂತ್ರಸ್ತೆಯರಿಗೆ ನೈತಿಕ ಬೆಂಬಲ ಘೋಷಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮೇ 30ರಂದು ಹಮ್ಮಿಕೊಂಡಿರುವ ಹಾಸನ ಚಲೋಗೆ ಜಿಲ್ಲಾ ಸಿಐಟಿಯು ಸಹಕಾರ ನೀಡುತ್ತಿದ್ದು, ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ರಾಜ್ಯ ಕಾರ್ಯದರ್ಶಿ ಎಚ್.ಎಸ್.ಸುನಂದಾ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರವು ಕೇಳಿಬಂದ ಮಹಿಳೆಯರನ್ನು, ಪಕ್ಷದ ಕಾರ್ಯಕರ್ತೆಯರನ್ನು ತನ್ನ ವಿಕೃತ ಲೈಂಗಿಕತೆಗೆ ದುರ್ಬಳಕೆ ಮಾಡಿಕೊಂಡಿರುವ ಪ್ರಜ್ವಲ್ ಬಂಧನಕ್ಕೆ ತೀವ್ರಮಟ್ಟದ ಕ್ರಮಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಬೇಕು. ಪೆನ್‌ಡ್ರೈವ್ ಹಂಚಿ ಮಹಿಳೆಯರ ಘನತೆಗೆ ಕುಂದು ತಂದವರ ಮೇಲೂ ಕ್ರಮವಾಗಬೇಕು’ ಎಂದು ಆಗ್ರಹಿಸಿದರು.
‘ಪ್ರಜ್ವಲ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ, ಪಾಸ್‌ಪೋರ್ಟ್ ರದ್ದುಗೊಳಿಸಿ ಬಂಧಿಸಬೇಕು. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿ, ಅಂತಿಮ ವರದಿಯನ್ನು ಹೈಕೋರ್ಟ್ ನ್ಯಾಯಾಧೀಶರ ಪರಿಶೀಲನೆ ಬಳಿಕ ಸರ್ಕಾರಕ್ಕೆ ನೀಡಬೇಕು. ಹಾಸನ ಚಲೋ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಮುಖಂಡರ ಅಹವಾಲು ಆಲಿಸಬೇಕು’ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಜಯರಾಂ, ಜಯಂತಿ, ಲತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.