ಮೈಸೂರು: ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನಕ್ಕೆ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಭಾರತದ ಖ್ಯಾತ ಆರ್ಥಿಕ ತಜ್ಞ, ಅಭಿವೃದ್ಧಿಯ ಹರಿಕಾರ, ರಾಜಕೀಯದ ಅಜಾತಶತ್ರು, ಸಜ್ಜನ ಮುತ್ಸದ್ದಿಯೂ ಆಗಿದ್ದರು. ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿದ್ದರು’ ಎಂದು ನೆನೆದಿದ್ದಾರೆ.
‘ಹಣಕಾಸು ಸಚಿವಾಲಯದ ಪ್ರಧಾನ ಸಲಹೆಗಾರ, ಕಾರ್ಯದರ್ಶಿ, ಯೋಜನಾ ಆಯೋಗದ ಸದಸ್ಯ, ಆರ್‌ಬಿಐ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ಅಂದಿನ ಪ್ರಧಾನಿಗಳ ಆರ್ಥಿಕ ಸಲಹೆಗಾರ, ಯುಜಿಸಿ ಅಧ್ಯಕ್ಷ ಹೀಗೆ... ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಪ್ರತಿಮ ಪ್ರತಿಭಾವಂತರಾಗಿದ್ದರೂ ಸರಳ, ಸಜ್ಜನ, ನಿಗರ್ವಿ ಹಾಗೂ ವಿನೀತರೂ ಆಗಿದ್ದರು. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಪಿ.ವಿ. ನರಸಿಂಹರಾವ್ ಅವರ ಸಂಪುಟದಲ್ಲಿ ಅರ್ಥ ಸಚಿವರಾಗಿ ಜಾಗತೀಕರಣ, ಉದಾರೀಕರಣದ ಹರಿಕಾರರಾಗಿ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿದವರು. ಹತ್ತು ವರ್ಷ ಪ್ರಧಾನ ಮಂತ್ರಿಯಾಗಿ, ದೇಶ ಸೇವೆಗಾಗಿ ಮುಡುಪಾಗಿಟ್ಟುಕೊಂಡ ಧೀಮಂತ’ ಎಂದು ಸ್ಮರಿಸಿದ್ದಾರೆ.
‘ಅವರು ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಕಟ್ಟಡದ ಭೂಮಿಪೂಜೆ ನೆರವೇರಿಸಿದ್ದು ಹಾಗೂ ಸುತ್ತೂರು ಕ್ಷೇತ್ರದಲ್ಲಿ ದಾಸೋಹ ಭವನ ಉದ್ಘಾಟಿಸಿದ್ದು ನಮ್ಮೆಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿದೆ. ಅವರು ಪಕ್ಷಗಳ ಚೌಕಟ್ಟನ್ನು ಮೀರಿ ಬೆಳೆದಿದ್ದರು. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುತ್ತಿದ್ದ ಧೀಮಂತ ಚೇತನ. ಕೇಂದ್ರ ಸರ್ಕಾರದ ಬಗ್ಗೆ ಈಗಲೂ ಕೆಲವು ಸಂದರ್ಭಗಳಲ್ಲಿ ಅವರು ವಸ್ತುನಿಷ್ಠವಾಗಿ ಪ್ರಶಂಸೆ ವ್ಯಕ್ತಪಡಿಸುದುದು ಅದಕ್ಕೆ ಸಾಕ್ಷಿ. ರಾಜಕೀಯದಲ್ಲಿ ಸಜ್ಜನಿಕೆಯ ಕೊಂಡಿಯಂತಿದ್ದ ಹಳೆಯ ತಲೆಮಾರಿನ ಈ ಹಿರಿಯರ ಅಗಲುವಿಕೆ ಒಂದು ನಿರ್ವಾತ ಸ್ಥಿತಿಯನ್ನು ನಿರ್ಮಿಸಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.