
ಮೈಸೂರು: ‘ಸ್ವಾಮಿ ವಿವೇಕಾನಂದ ಆಧ್ಯಾತ್ಮಿಕ ಚಿಂತಕರು ಮಾತ್ರವಲ್ಲದೆ, ಯುವಜನರ ಸ್ಫೂರ್ತಿಯ ಸೆಲೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಆರ್.ತಿಮ್ಮೇಗೌಡ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದರ ಚಿಂತನೆಗಳು- ಒಂದು ಅವಲೋಕನ’ ಕುರಿತು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿಯ ಪಾತ್ರ ಗುರುತಿಸಲು ಮತ್ತು ಅವರಿಗೆ ವಿವೇಕಾನಂದರ ಉನ್ನತ ಆದರ್ಶ ತಲುಪಿಸಲು ಈ ದಿನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಜಗತ್ತಿಗೆ ತೋರಿದ ಮಹಾನ್ ಪುಣ್ಯಪುರುಷ ವಿವೇಕಾನಂದರು. ಅವರ ಸಂದೇಶವು ಯುವಜನರಲ್ಲಿ ರಾಷ್ಟ್ರೀಯತೆ, ಶಕ್ತಿ ಮತ್ತು ಮಾನವೀಯತೆ ಜಾಗೃತಗೊಳಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಆರ್.ಜಯಕುಮಾರಿ ಮಾತನಾಡಿ, ‘ಸ್ವಾಮಿ ವಿವೇಕಾನಂದರು ಒಬ್ಬ ವ್ಯಕ್ತಿಯಲ್ಲ. ಒಂದು ಶಕ್ತಿ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ಎನ್ಎಸ್ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿ ದೊಡ್ಡರಸಯ್ಯ ಜಿ., ನಿರಂಜನ್ ಎಲ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.