ADVERTISEMENT

ಮೈಸೂರು: ಪೌರಕಾರ್ಮಿಕರಿಂದ ದಸರಾ ಉದ್ಘಾಟಿಸಲು ಒತ್ತಾಯ

ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:33 IST
Last Updated 7 ಸೆಪ್ಟೆಂಬರ್ 2020, 15:33 IST
ದಸರಾ ಉದ್ಘಾಟನೆಗೆ ಪೌರಕಾರ್ಮಿಕರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಮೈಸೂರು ಪಾಲಿಕೆ ಮುಂಭಾಗ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು
ದಸರಾ ಉದ್ಘಾಟನೆಗೆ ಪೌರಕಾರ್ಮಿಕರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಮೈಸೂರು ಪಾಲಿಕೆ ಮುಂಭಾಗ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು   

ಮೈಸೂರು: ಈ ಬಾರಿ ದಸರಾವನ್ನು ಅರುಂಧತಿಯಾರ್ ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.

ಮೈಸೂರು ದೇಶದಲ್ಲೇ 3 ಬಾರಿ ಸ್ವಚ್ಛನಗರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರಲ್ಲಿ ಪೌರಕಾರ್ಮಿಕರ ಶ್ರಮ ಅತಿ ಹೆಚ್ಚಾಗಿದೆ. ಇದನ್ನು ಪರಿಗಣಿಸಿ ದಸರಾ ಉದ್ಘಾಟನೆಗೆ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪೌರಕಾರ್ಮಿಕರ ‍ಪಾದಪೂಜೆ ಮಾಡಿದರು. ಈ ಮೂಲಕ ಮಾನವೀಯತೆಯನ್ನು ಅವರು ಮೆರೆದಿದ್ದಾರೆ. ಇನ್ನಾದರೂ, ರಾಜ್ಯ ಸರ್ಕಾರ ಈ ಅಂಶವನ್ನೆಲ್ಲ ಪರಿಗಣಿಸಿ ದಸರಾ ಉದ್ಘಾಟನೆಗೆ ಅವಕಾಶ ಮಾಡಿಕೊಡಬೇಕು ಎಂದರು.

ADVERTISEMENT

ತಮಿಳುನಾಡಿನ ರೀತಿಯಲ್ಲೇ ರಾಜ್ಯದಲ್ಲೂ ಅರುಂಧತಿಯಾರ್ ಪೌರಕಾರ್ಮಿಕರಿಗೆ ಶೇ 3ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು, ಪ್ರತ್ಯೇಕವಾಗಿ ಮನೆ ನಿರ್ಮಿಸಿಕೊಡಬೇಕು, ಉಚಿತವಾಗಿ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗಳನ್ನು ಆನ್‌ಲೈನ್ ಶಿಕ್ಷಣಕ್ಕಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಹೊರಗುತ್ತಿಗೆಯಲ್ಲಿ ದುಡಿಯುವವರಿಗೆ ಉದ್ಯೋಗ ಭದ್ರತೆ ನೀಡಬೇಕು, ₹ 50 ಲಕ್ಷ ವಿಮೆ ಮಾಡಿಸಿ, ಅದರ ಕಂತುಗಳನ್ನು ಪಾಲಿಕೆಯ ಮೀಸಲಾತಿ ಹಣದಿಂದ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಣಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಧರ್ಮರಾಜ್, ರಾಜ್ಯ ಗೌರವಾಧ್ಯಕ್ಷ ನಾಗರಾಜ್, ರಾಜ್ಯ ಘಟಕದ ಅಧ್ಯಕ್ಷ ಆರ್.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.