ADVERTISEMENT

ಏನೂ ಇಲ್ಲದಾಗ ಎಲ್ಲವನ್ನೂ ಸೃಷ್ಟಿಸಬೇಕು: ಟಿ.ಎಸ್.ನಾಗಾಭರಣ ಹೇಳಿಕೆ

ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಚಲನಚಿತ್ರ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 15:26 IST
Last Updated 13 ಜುಲೈ 2019, 15:26 IST
ಮೈಸೂರು ಸಾಹಿತ್ಯ ಸಂಭ್ರಮದ ‘ಚಲನಚಿತ್ರ ಪ್ರಪಂಚದಲ್ಲಿ ನಿರ್ದೇಶಕರ ಕಮಾಲ್’ ಸಂವಾದದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿದರು. ಚಲನಚಿತ್ರ ನಿರ್ದೇಶಕ ಬಿ.ಸುರೇಶ, ನಿರೂಪಕ ವಿವೇಕ ಇದ್ದಾರೆ
ಮೈಸೂರು ಸಾಹಿತ್ಯ ಸಂಭ್ರಮದ ‘ಚಲನಚಿತ್ರ ಪ್ರಪಂಚದಲ್ಲಿ ನಿರ್ದೇಶಕರ ಕಮಾಲ್’ ಸಂವಾದದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿದರು. ಚಲನಚಿತ್ರ ನಿರ್ದೇಶಕ ಬಿ.ಸುರೇಶ, ನಿರೂಪಕ ವಿವೇಕ ಇದ್ದಾರೆ   

ಮೈಸೂರು: ‘ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡಿದಂತೆ ಸಿನಿಮಾ ಮಾಡುವುದು ನಿರ್ದೇಶಕನ ಕೆಲಸವಾಗಬಾರದು. ಏನೂ ಇಲ್ಲದಾಗ ಎಲ್ಲವನ್ನೂ ಸೃಷ್ಟಿಸಬೇಕು’ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಮೈಸೂರು ಸಾಹಿತ್ಯ ಸಂಭ್ರಮದ ‘ಚಲನಚಿತ್ರ ಪ್ರಪಂಚದಲ್ಲಿ ನಿರ್ದೇಶಕರ ಕಮಾಲ್’ ಸಂವಾದದಲ್ಲಿ ಮಾತನಾಡಿದ ಅವರು, ‘ಇಂದಿನ ಪ್ರೇಕ್ಷಕರು ತುಂಬಾ ಸೂಕ್ಷ್ಮವಾಗಿದ್ದಾರೆ. ಚಿತ್ರದ ಎರಡನೇ ಸೀನ್‌ನಲ್ಲೇ ಚಲನಚಿತ್ರದ ಗುಣಮಟ್ಟ ಅಳೆಯುತ್ತಾರೆ. ಬೇರೆ ಬೇರೆ ಚಿತ್ರ ನಿರ್ಮಿಸುವಾಗ ವಿಭಿನ್ನ ಸಮಸ್ಯೆ ಎದುರಾಗುತ್ತವೆ. ಸವಾಲನ್ನು ಎದುರಿಸುವ ಪರಿಣಿತಿ ಸಾಧಿಸುವ ಹುಡುಕಾಟದಲ್ಲಿ ಇಂದಿಗೂ ನಾನಿನ್ನು ಸಾಗಿರುವೆ’ ಎಂದು ಸಂವಾದದ ನಿರೂಪಕ ವಿವೇಕ ಪ್ರಶ್ನೆಗೆ ನಾಗಾಭರಣ ಉತ್ತರಿಸಿದರು.

‘ಸಿನಿಮಾ ಶಿಕ್ಷಣದ ವಿದ್ಯಾರ್ಥಿ ನಾನು. ಆರಂಭದ ದಿನಗಳಲ್ಲಿ ಸಿನಿಮಾ ನೋಡಲಿಕ್ಕಾಗಿಯೇ ಎಲ್ಲೆಡೆ ಅಲೆದವನು. ಕಾಲ ಬದಲಾಗಿದೆ. ಬೆರಳ ತುದಿಯಲ್ಲೇ ತಮಗೆ ಬೇಕಾದ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಇಂದಿನ ತಲೆಮಾರಿಗೆ ಲಭಿಸಿದೆ. ಸಿನಿಮಾ ನೋಡುವುದಕ್ಕೆ ಸೀಮಿತರಾಗಬೇಡಿ. ಓದಲು ಆರಂಭಿಸಿ’ ಎಂದು ಸಲಹೆ ನೀಡಿದರು.

ADVERTISEMENT

‘ಹದಿನಾರನೇ ವಯಸ್ಸಿನಲ್ಲೇ ಬಿ.ವಿ.ಕಾರಂತ ಸಂಪರ್ಕಕ್ಕೆ ಬಂದು ರಂಗಭೂಮಿಯ ನಂಟು ಬೆಳೆಸಿಕೊಂಡೆ. ಕಾರಂತ, ಕಾರ್ನಾಡರಿಗೆ ಸಹ ನಿರ್ದೇಶಕನಾಗಿ ದುಡಿದೆ. 1975ರಲ್ಲಿ ‘ಗ್ರಹಣ’ ಸಿನಿಮಾ ಕೈಗೆತ್ತಿಕೊಂಡೆ. ಮೂರು ವರ್ಷವಾಯ್ತು ಈ ಸಿನಿಮಾ ಮುಗಿಯಲು. ಕಾರ್ನಾಡ ಸೂಚನೆಯಂತೆ ಹಿಡಿದ ಕೆಲಸ ಮುಗಿಸಿದೆ. ಇದೇ ಅವಧಿಯಲ್ಲಿ ದುಡ್ಡಿಲ್ಲದೆ, ನಟನಿಲ್ಲದೆ, ಪರಿಕರಗಳಿಲ್ಲದೆ, ಪ್ರೇಕ್ಷಕನಿಲ್ಲದೆ, ಏನೂ ಇಲ್ಲದೇ ಸಿನಿಮಾವನ್ನು ಹೇಗೆ ಮಾಡಬಹುದು ಎಂದು ಕಂಡುಕೊಂಡೆ. ಇದರ ಫಲವಾಗಿಯೇ ಮೊದಲ ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಸಿಕ್ಕವು’ ಎಂದು ನಾಗಾಭರಣ ತಮ್ಮ ಸಿನಿ ಯಾನದ ಆರಂಭ ತಿಳಿಸಿದರು.

‘ಎಂಜಿನಿಯರಿಂಗ್ ಪದವೀಧರ. ಬಿಎಚ್‌ಸಿಎಲ್‌ನಲ್ಲಿನ ಕೆಲಸ ಬಿಟ್ಟು 1988ರಲ್ಲಿ ಸಿನಿಮಾ ಕ್ಷೇತ್ರ ಪ್ರವೇಶಿಸಿದೆ. ನನ್ನ ಮೊದಲ ಚಿತ್ರ ಶಂಕರ್‌ನಾಗ್‌ ಅಭಿನಯದ ಚಿತ್ರವಾಗಬೇಕಿತ್ತು. ಆದರೆ ಅದು ಕೈಗೂಡಲಿಲ್ಲ. ಸಿನಿಮಾ ನಿರ್ದೇಶಿಸಲೇಬೇಕು ಎಂಬ ಉತ್ಕಟ ಆಕಾಂಕ್ಷೆಯಿಂದ ಸ್ನೇಹಿತರ ಬಳಿ ಸಾಲ ಮಾಡಿ ₹ 22 ಲಕ್ಷ ಬಂಡವಾಳ ಹೂಡಿ ‘ಅರ್ಥ’ ಸಿನಿಮಾ ಮಾಡಿದೆ.’

‘ಕಲಬುರ್ಗಿ ವಲಯದಲ್ಲೇ ₹ 28 ಲಕ್ಷ ಹಣ ಬಂತು. ಇದರ ಬೆನ್ನಿಗೆ ಸಬ್ಸಿಡಿ, ಪ್ರಶಸ್ತಿಯೂ ಸಿಕ್ಕಿತು. ಒಟ್ಟಾರೆ ₹ 60 ಲಕ್ಷ ಗಳಿಕೆಯಾಯ್ತು. ಸ್ನೇಹಿತರ ಸಾಲ ತೀರಿಸಿದ ಬಳಿಕ ಉಳಿದ ಹಣದಲ್ಲಿ ಅವರ ಸಲಹೆಯಂತೆ ದೇವನಹಳ್ಳಿ ಬಳಿ ಆಗ ಒಂದು ಎಕರೆಗೆ ₹ 1.5 ಲಕ್ಷದಂತೆ ಎಂಟು ಎಕರೆ ಭೂಮಿ ಖರೀದಿಸಿದೆ. ಇದೀಗ ಅದರ ಮೌಲ್ಯ ಹಲವು ನೂರು ಪಟ್ಟಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ಬಿ.ಸುರೇಶ್‌ ತಮ್ಮ ಸಿನಿ ಯಾನದ ಆರಂಭದ ನೆನಪಿನ ಬುತ್ತಿಯನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.