ಮೈಸೂರು: ಅಥರ್ವ ನವರಂಗೆ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ ಅವರು ಇಲ್ಲಿ ನಡೆಯುತ್ತಿರುವ ಮೂರನೇ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 15 ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು. 17 ವರ್ಷದ ಒಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ಎನ್. ಆರ್ಣವ್ ಪ್ರಶಸ್ತಿ ಗೆದ್ದರು.
ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯು ನಗರದ ಮೈಸೂರು ವಿ.ವಿ. ಜಿಮ್ನಾಷಿಯಂ ಹಾಲ್‌ನಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಥರ್ವ 8-11, 11-6, 11-7, 11-7 ಅಂತರದಿಂದ ಎನ್. ಆರ್ಣವ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಪುಟಿದೆದ್ದು ಉಳಿದ ಮೂರು ಸೆಟ್ ಗೆಲ್ಲುವ ಮೂಲಕ ಅವರು ಪ್ರಶಸ್ತಿ ಎತ್ತಿ ಹಿಡಿದರು.
ಸೆಮಿಫೈನಲ್‌ನಲ್ಲಿ ಆರ್ಣವ್, ಗೌರವ್ ಗೌಡ ವಿರುದ್ಧ, ಅಥರ್ವ ಅವರು ಸಿದ್ಧಾರ್ಥ ವಿರುದ್ಧ ಜಯಗಳಿಸಿದ್ದರು.
ಇದೇ ವಿಭಾಗದ ಬಾಲಕಿಯರ ಫೈನಲ್‌ನಲ್ಲಿ ತನಿಷ್ಕಾ 10-12, 11-5, 11-7, 11-9 ಅಂತರದಿಂದ ಹಿಯಾ ಸಿಂಗ್ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ತನಿಷ್ಕಾ, ಕೈರಾ ಬಾಳಿಗ ಎದುರು ಹಾಗೂ ಹಿಯಾ, ಶಿವಾನಿ ಮಹೇಂದ್ರನ್ ವಿರುದ್ಧ ಗೆಲುವು ದಾಖಲಿಸಿದ್ದರು.
ಆರ್ಣವ್‌ಗೆ ಪ್ರಶಸ್ತಿ:
ಟೂರ್ನಿಯ 17 ವರ್ಷ ಒಳಗಿನ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಎನ್. ಆರ್ಣವ್ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಅವರು ಸಿದ್ಧಾರ್ಥ ಧಾರಿವಾಲ್ ಅವರನ್ನು 12-10, 11-9, 12-10 ಅಂತರದಲ್ಲಿ ಮಣಿಸಿದರು.
ಸೆಮಿಫೈನಲ್‌ನಲ್ಲಿ ಆರ್ಣವ್ ತೇಶುಬ್ ದಿನೇಶ್ ಎದುರು ಹಾಗೂ ಸಿದ್ಧಾರ್ಥ ಅವರು ಆರ್ಯ ಜೈನ್ ವಿರುದ್ಧ ಗೆಲವು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.