ADVERTISEMENT

ಹುಣಸೂರು | ಟ್ಯಾಂಕ್ ಕಾಮಗಾರಿ: ಶಾಸಕ ಮಂಜುನಾಥ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:21 IST
Last Updated 25 ಜೂನ್ 2022, 4:21 IST
ಹುಣಸೂರು ನಗರದ ಕರಿಗೌಡ ಬೀದಿಯಲ್ಲಿ ನಿರ್ಮಾಣವಾಗುತ್ತಿರುವ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು
ಹುಣಸೂರು ನಗರದ ಕರಿಗೌಡ ಬೀದಿಯಲ್ಲಿ ನಿರ್ಮಾಣವಾಗುತ್ತಿರುವ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು   

ಹುಣಸೂರು: ‘ಮುಂದಿನ 30 ವರ್ಷಗಳ ಅವಧಿಗೆ ಶುದ್ಧ ಕುಡಿಯುವ ನೀರು ಪೂರೈಸಲು ನಗರೋತ್ಥಾನ ಯೋಜನೆಯಲ್ಲಿ ಮೂರನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಎಚ್‌.ಪಿ. ಮಂಜುನಾಥ್ ಹೇಳಿದರು.

ನಗರದ ಕರಿಗೌಡ ಬೀದಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಡೆಯುತ್ತಿರುವ ₹ 2.31 ಕೋಟಿ ವೆಚ್ಚದ 10 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

‘ನಗರದ ಜನಸಂಖ್ಯೆಗೆ ಅನುಗುಣವಾಗಿ ಮುಂದಿನ 30 ವರ್ಷಗಳ ಅವಧಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ಸಿದ್ಧಗೊಳಿಸಿ ಮೂರು ಹಂತದಲ್ಲಿ ಅನುಷ್ಠಾನಗೊಳಿಸಲಾಗಿದೆ. ಮೊದಲ ಹಂತದಲ್ಲಿ ಲಕ್ಷ್ಮಣತೀರ್ಥ ನದಿ ಪಂಪ್ ಹೌಸ್ ಅಭಿವೃದ್ಧಿ, ಎರಡನೇ ಹಂತದಲ್ಲಿ ಕಾವೇರಿ ಕುಡಿಯುವ ನೀರು ಸಂಗ್ರಹಕ್ಕೆ ನಗರದ ಮೂರು ಬಡಾವಣೆಯಲ್ಲಿ ತಲಾ 5 ಲಕ್ಷ ಸಾಮರ್ಥ್ಯದ ಟ್ಯಾಂಕ್ ₹ 1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ’ಎಂದುಹೇಳಿದರು.

ADVERTISEMENT

‘ಅಯ್ಯಪ್ಪಸ್ವಾಮಿ ದೇವಸ್ಥಾನ, ಶಬ್ಬೀರ್ ನಗರ ಮತ್ತು ಎನ್.ಎಸ್.ತಿಟ್ಟು ಬಡಾವಣೆಯಲ್ಲಿ ನಿರ್ಮಾಣವಾದ ಟ್ಯಾಂಕ್‌ನಿಂದ ನೀರು ಪೂರೈಸಿ, ಗುಣಮಟ್ಟ ಪರೀಕ್ಷೆ ನಡೆದಿದೆ. ಮೂರನೇ ಹಂತದಲ್ಲಿ ₹ 2.31 ಕೋಟಿ ವೆಚ್ಚದಲ್ಲಿ 10 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್ ನಿರ್ಮಾಣ ಆರಂಭವಾಗಿದೆ’ ಎಂದರು.

ನಗರಸಭೆ ಅಧ್ಯಕ್ಷರಾದ ಸಮೀನಾ ಫರ್ವಿನ್, ಸದಸ್ಯರಾದ ಸೌರಭಾ ಸಿದ್ದರಾಜು, ಪ್ರೇಮಾ, ಗೀತಾ, ಸ್ವಾಮಿಗೌಡ, ಅನುಷಾ, ಮಂಜು, ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.