ADVERTISEMENT

‘ತನಿಖೆಯಲ್ಲಿ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಬಹಿರಂಗ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 10:49 IST
Last Updated 25 ಫೆಬ್ರುವರಿ 2020, 10:49 IST
ರವಿ ಪೂಜಾರಿ
ರವಿ ಪೂಜಾರಿ   

ಮೈಸೂರು: ‘ಭೂಗತ ಪಾತಕಿ ರವಿ ಪೂಜಾರಿ ನನಗೆ ಮತ್ತು ಸಾ.ರಾ.ಮಹೇಶ್‌ ಅವರಿಗಷ್ಟೇ ಬೆದರಿಕೆ ಹಾಕಿರಲಿಲ್ಲ. ಇನ್ನೂ ಹಲವು ಶಾಸಕರಿಗೆ ಬೆದರಿಕೆಯೊಡ್ಡಿದ್ದ. ಪೊಲೀಸರ ತನಿಖೆಯಲ್ಲಿ ಇದು ಬಹಿರಂಗಗೊಳ್ಳಲಿದೆ’ ಎಂದು ಶಾಸಕ ತನ್ವೀರ್‌ ಸೇಠ್‌ ಸೋಮವಾರ ಇಲ್ಲಿ ಪ್ರತಿಕ್ರಿಯಿಸಿದರು.

ತಮ್ಮ ಮೇಲಿನ ಕೊಲೆ ಯತ್ನದ ಬಗ್ಗೆ ಮಾತನಾಡಿದ ಶಾಸಕರು, ‘ನನ್ನ ಮೇಲೆ ನಡೆದ ಹಲ್ಲೆ ಅನಿರೀಕ್ಷಿತ. ನಡೆಯಬಾರದಿತ್ತು, ನಡೆದಿದೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ಯಾವುದೇ ತಕರಾರಿಲ್ಲ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದರು.

‘ನಾನೀಗ ಆರೋಗ್ಯವಾಗಿದ್ದೇನೆ. ಧ್ವನಿ ಪೆಟ್ಟಿಗೆ ಮಾತ್ರ ಹಂತ ಹಂತವಾಗಿ ಸರಿಯಾಗುತ್ತಿದ್ದು, ಧ್ವನಿ ಸರಿಯಾಗಲು ಥೆರಪಿ ನಡೆಯುತ್ತಿದೆ. ಇನ್ಮುಂದೆ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗುವೆ. ಮಾರ್ಚ್‌ 2ರಿಂದ ಆರಂಭವಾಗುವ ಬಜೆಟ್‌ ಅಧಿವೇಶನಕ್ಕೆ ಹಾಜರಾಗುವೆ’ ಎಂದರು.

ADVERTISEMENT

ಬಿಗಿ ಭದ್ರತೆ: ದುಬೈನಿಂದ ತನ್ವೀರ್‌ ಮೈಸೂರಿಗೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ಮನೆಯತ್ತ ತಂಡೋಪ ತಂಡವಾಗಿ ಧಾವಿಸಿದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪ್ರತಿಯೊಬ್ಬರನ್ನೂ ತಪಾಸಿಸಿಯೇ ಒಳ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.