ಹುಣಸೂರು: ಬೌದ್ಧಿಕವಾಗಿ ಬೆಳೆದ ಮಕ್ಕಳ ಆಲೋಚನಾ ಶಕ್ತಿಗೆ ಅನುಗುಣವಾಗಿ ಶಿಕ್ಷಕರು ಸ್ಪಂದಿಸುವ ಸಾಮರ್ಥ್ಯ ಹೊಂದಿದರೆ, ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿ ಆಗಲಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದ ಕುಡಿಗಳ ಬದುಕು ರೂಪಿಸುವ ಜವಾಬ್ದಾರಿ ಹೊತ್ತ ಶಿಕ್ಷಕ ವರ್ಗ ಮಕ್ಕಳಲ್ಲಿ ಬದುಕು ಕಟ್ಟಿಕೊಳ್ಳುವ ದಿಕ್ಕು ತೋರಿಸುವ ಪಠ್ಯವನ್ನು ತರಗತಿಯಲ್ಲಿ ತಿಳಿಸಬೇಕು. ಸಾಮಾಜಿಕ ಜೀವನ ರೂಪಿಸಿಕೊಳ್ಳುವ ಕೌಶಲ ಇಲ್ಲದಿದ್ದರೆ ಹೆಚ್ಚು ಅಂಕ ಮಾತ್ರ ಪ್ರಯೋಜನಕ್ಕೆ ಬರುವುದಿಲ್ಲ ಎಂದರು.
ಗುರುಗಳಿಗೆ ದಶಕಗಳ ಹಿಂದೆ ಸಮಾಜ ನೀಡುತ್ತಿದ್ದ ಗೌರವ ಇಂದು ಇಲ್ಲವಾಗಿದೆ. ಈ ಬದಲಾವಣೆಗೆ ಕಾರಣವೇನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಭವಿಷ್ಯ ನಿರ್ಮಾತೃಗಳನ್ನು ಸಕಾರಾತ್ಮಕ ಅಂಶ ತಿಳಿಸುವ ಮೂಲಕ ಬೆಳೆಸಬೇಕಾದ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲಿಗಿದೆ ಎಂದರು.ಕ್ಷೇತ್ರದ ಶಿಕ್ಷಣ ಇಲಾಖೆಯ ಸಮಸ್ಯೆಗಳಲ್ಲಿ ಕೆಲವು ಪರಿಹಾರವಾಗಿವೆ. ಉಳಿವುಗಳನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಟಿಇಟಿ ಪರೀಕ್ಷೆ : ಸುಪ್ರೀಂಕೋರ್ಟ್ ಜಾರಿಗೊಳಿಸಿದ ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆ ಕಡ್ಡಾಯವಾಗಿ ತೇರ್ಗಡೆ ಆದಲ್ಲಿ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯ ಎಂಬ ಕಾನೂನು ಜಾರಿಗೊಳಿಸಿದೆ. ಈ ಸಂಬಂಧ ಮಾನವ ಸಂಪನ್ಮೂಲ ಸಚಿವಾಲಯದ ಸಚಿವರನ್ನು ಎಚ್.ಡಿ.ಕುಮಾರಸ್ವಾಮಿ ಮೂಲಕ ಭೇಟಿ ಮಾಡಿ ಸಮಸ್ಯೆ ಕುರಿತು ಚರ್ಚಿಸುವ ಪ್ರಯತ್ನ ಮಾಡುವೆ.
ಶಿಕ್ಷಣ ಕ್ಷೇತ್ರದಲ್ಲಿನ ಸಿಬ್ಬಂದಿಯನ್ನು ಇತರೆ ಕೆಲಸಗಳಿಗೆ ನಿಯೋಜಿಸಿಕೊಳ್ಳುತ್ತಿದ್ದು, ಅದರಿಂದ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡಲಾಗುತ್ತಿಲ್ಲ ಎಂಬ ಕೂಗಿದೆ. ಬಿಸಿಯೂಟ ನಿರ್ವಹಣೆಯೂ ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು ಈ ಸಂಬಂಧ ಸದನದಲ್ಲಿ ಚರ್ಚಿಸಿ ಶಿಕ್ಷಕರನ್ನು ಶಾಲೆಗೆ ಸೀಮಿತಗೊಳಿಸುವಂತೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ ಮಾತನಾಡಿ, ಶಿಕ್ಷಕರಾಗಿ ನೇಮಕಗೊಂಡವರು ತರಗತಿ ಕೆಲಸ ಮಾಡುವ ಬದಲಿಗೆ ಉಳಿದೆಲ್ಲಾ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಶಾಲಾ ಶಿಕ್ಷಕರನ್ನು ಸರ್ಕಾರಿ ದತ್ತಾಂಶ ಸಂಗ್ರಹ, ಚುನಾವಣೆ , ವಿವಿಧ ಕಾರ್ಯಕ್ರಮಗಳಿಗೆ ನಿಯೋಜಿಸುವುದರಿಂದ ಗುಣಮಟ್ಟ ಕಾದುಕೊಳ್ಳಲಾಗುತ್ತಿಲ್ಲ. ಮುಖ್ಯಮಂತ್ರಿ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದರು.
ಶಿಕ್ಷಕರನ್ನು ಬೋಧನಾ ಕ್ಷೇತ್ರಕ್ಕೆ ಸೀಮಿತಗೊಳಿಸಿ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಶಾಸಕರು ಸದನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಪ್ರಸ್ತಾಪಿಸಿಬೇಕು ಎಂದು ಮನವಿ ಮಾಡಿದರು.
ಪ್ರೊ.ನಾಗಣ್ಣ ಸಿ. ಪ್ರಧಾನ ಭಾಷಣ ನೀಡಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚೇತನ್ ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಕಾವೇರಿ ಆಸ್ಪತ್ರೆ ವೈದ್ಯ ಡಾ.ಲೋಹಿತ್ ಮಾತನಾಡಿದರು. ವೇದಿಕೆಯಲ್ಲಿ ಬಿಇಒ ಮಹದೇವ್,ನಗರಸಭೆ ಆದ್ಯಕ್ಷ ಮಲ್ಲಿಕ್ ಪಾಶಾ, ಹೇಮಲತಾ, ರಾಜೇಂದ್ರ,ಮೋಹನ್ ರಾಜ್, ಗೋವಿಂದೇಗೌಡ ,ಚೆನ್ನವೀರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.