ಮೈಸೂರು: ‘ಮಾನವನ ರಾಜಕೀಯ ಲಾಭಕೋರತನ ಹಾಗೂ ದುರಾಸೆ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಆಡಿದ್ದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ರಂಗಕರ್ಮಿ ಪ್ರಸಾದ್ ಕುಂದೂರು ಹೇಳಿದರು.
ಹೂಟಗಳ್ಳಿಯ ಒಡನಾಡಿ ಸಂಸ್ಥೆಯಲ್ಲಿ ಗುರುವಾರ ನಡೆದ ‘ಪ್ರಚಲಿತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ’ ಕುರಿತು ಮಾತನಾಡಿದರು.
‘ಮನುಷ್ಯ ಹೆಚ್ಚು ನೈತಿಕವಾಗಿ ಬಾಳಲು ಕಾಡು, ಹಸಿರು, ಕೆಸರು ಕೊಡುವಷ್ಟು ಕೊಡುಗೆಯನ್ನು ನಗರ, ಮಹಾನಗರಗಳು ಎಂದೂ ಕೊಡಲಾರವು. ನಗರಗಳು ಮೋಸ, ವಂಚನೆಗೆ ಅವಕಾಶ ಮಾಡಿಕೊಡುತ್ತವೆಯೆಂದು ತೇಜಸ್ವಿ ತಿಳಿದಿದ್ದರು. ಅವರು ಹೆಚ್ಚು ಮಾತನಾಡಿದ್ದು, ಬಾಳಿದ್ದು ಕೀಟ, ಪತಂಗ, ನಾಯಿ, ಮೀನು, ಹಕ್ಕಿ, ಉಡ, ಇರುವೆಗಳ ಜೊತೆ’ ಎಂದು ಸ್ಮರಿಸಿದರು.
‘ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವವಿಜ್ಞಾನ ಮುಂತಾದವುಗಳ ಬಗ್ಗೆ ಪಾಂಡಿತ್ಯ ಹೊಂದಿದ್ದ ತೇಜಸ್ವಿ, ಬದುಕಿದ್ದು ದಟ್ಟ ಹಸಿರಿನ ಕಾಡುಗಳ ನಡುವೆ’ ಎಂದು ಹೇಳಿದರು.
‘ತಂದೆ ಕುವೆಂಪು ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಸರ್ಕಾರಿ ಹುದ್ದೆ ಬಯದಸೇ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕಾಫಿತೋಟ ಮಾಡಿಕೊಂಡು ಸ್ವತಂತ್ರ ಜೀವನ ಸಾಗಿಸಿದರು. ವ್ಯವಸಾಯ, ಛಾಯಾಚಿತ್ರ ಹಾಗೂ ಬೇಟೆಯಲ್ಲಿ ಆಸಕ್ತಿ ಇದ್ದ ತೇಜಸ್ವಿ ಅವರ ಮಲೆನಾಡಿನ ಜೀವನವನ್ನು ಅವರ ಕಥೆ– ಕಾದಂಬರಿಗಳ ಪಾತ್ರಗಳಿಂದ ನೋಡಬಹುದು’ ಎಂದು ತಿಳಿಸಿದರು.
‘ರಾಜಕೀಯ ಮೂಲಭೂತವಾದ ಕೊನೆಯಾದರೂ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಅತಿಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆಯೆಂದು ಮೂರು ದಶಕದ ಹಿಂದೆಯೇ ಹೇಳಿದ್ದರು. ಅದೀಗ ನಿಜವಾಗಿದೆ. ತೇಜಸ್ವಿ ಪರಿಸರವನ್ನು ಬೆರಗುಗಣ್ಣಿನಿಂದ ನೋಡುವಂತೆಯೇ ಮಾನವ ಸಮಾಜದ ತಲ್ಲಣಗಳನ್ನು ನೋಡುತ್ತಿದ್ದರು’ ಎಂದು ವಿವರಿಸಿದರು.
ಒಡನಾಡಿ ಸೇವಾ ಸಂಸ್ಥೆ ಸಂಚಾಲಕ ಸ್ಟ್ಯಾನ್ಲಿ ಮಾತನಾಡಿ, ‘ಕನ್ನಡ ವಿಚಾರದಲ್ಲಿ ಯಾರೇ ಕ್ಷುಲ್ಲಕ ಮಾತನಾಡಿದರೂ ತೇಜಸ್ವಿ ಸಹಿಸುತ್ತಿರಲಿಲ್ಲ. ನವೋದಯ, ನವ್ಯ ಸೇರಿದಂತೆ ಯಾವುದೇ ಸಾಹಿತ್ಯ ಪಂಥಕ್ಕೂ ಸೇರದೆ ಬದುಕಿನ ಅನುಭವಕ್ಕೆ ಬಂದ ಘಟನೆಗಳನ್ನೇ ಆಧರಿಸಿ ಕೃತಿ ರಚಿಸಿ ಪ್ರಕೃತಿ ಅನ್ವೇಷಿಸಿದರು’ ಎಂದರು.
ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.