ತಲಕಾಡು: ಪಂಚಲಿಂಗ ಸಮೂಹ ದೇವಾಲಯಗಳ ಅವರಣದಲ್ಲಿರುವ ಕೀರ್ತಿ ನಾರಾಯಣಸ್ವಾಮಿ ದೇವಾಲಯದ ಮುಂಭಾಗ ಇರುವ ಉಪಾಹಾರ ಗೃಹ ನಿರ್ವಹಣೆ ಇಲ್ಲದೆ ಸಂಪೂರ್ಣ ಪಾಳು ಬಿದ್ದಿದೆ.ಮದ್ಯಪಾನಿಗಳ ಅಡ್ಡೆ, ಅನೈತಿಕ ತಾಣ ವಾಗಿದೆ.
25 ವರ್ಷಗಳ ಹಿಂದೆ ಉಪಾಹಾರ ಗೃಹದ ನಿವೇಶನವನ್ನು ದೇವಾಲಯದ ಮುಖ್ಯ ಅರ್ಚಕ ದಿವಂಗತ ಕೃಷ್ಣ ಭಟ್ ದಾನವಾಗಿ ಪ್ರವಾಸೋದ್ಯಮ ಇಲಾಖೆಗೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಕಟ್ಟಡ ನಿರ್ಮಿಸಿತ್ತು. ಇಂದು ಬಳಕೆ ಇಲ್ಲದೆ, ಸಂಪೂರ್ಣ ಅವ್ಯವಸ್ಥೆ ಆಗರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸುಪರ್ದಿಯಲ್ಲಿರುವ ಉಪಾಹಾರ ಗೃಹದ ಚಾವಣಿಯ ಹೆಂಚು ನೆಲ, ಕಿಟಕಿ–ಬಾಗಿಲುಗಳು ಹಾಗೂಒಳಾಂಗಣ ಸಂಪೂರ್ಣ ಹಾಳಾಗಿವೆ. ಹಾವು, ಚೇಳು ಕಾಡು ಪ್ರಾಣಿಗಳ ವಾಸಸ್ಥಾನದಂತೆ ಭಾಸವಾಗುತ್ತಿದೆ. ಇದರ ಆವರಣ ಕಳೆ ಗಿಡ, ಮುಳ್ಳು ಕಂಟಿ ಬೆಳೆದುಕೊಂಡಿದ್ದು ಪಾನಪ್ರಿಯರ ನೆಚ್ಚಿನ ತಾಣವಾಗಿರುವುದು ಪ್ರಾವಾಸೋದ್ಯಮ ಅಭಿವೃದ್ಧಿಗೆ ಕಪ್ಪುಚುಕ್ಕಿಯಾಗಿದೆ.
ದೇವಾಲಯದ ಮುಂಭಾಗ ಇರುವ ಉಪಹಾರ ಗೃಹ ಹಾಳಾಗಿದೆ. ಸ್ವಚ್ಛತೆ ಇದರ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದು ಕ್ರಮ ತೆಗೆದುಕೊಳ್ಳುವೆ.
–ವೆಂಕಟೇಶ್ ಪ್ರಸಾದ್ ಕಾರ್ಯನಿರ್ವಹಣಾಧಿಕಾರಿ ದೇಗುಲ ಸಮೂಹ.
ದೇವಾಲಯಕ್ಕೆ ಬರುವ ಭಕ್ತರಿಗೆ ಕ್ಯಾಂಟೀನ್‌ನಿಂದ ತುಂಬಾ ತೊಂದರೆಯಾಗಿದೆ. ಆವರಣ ಮಲಮೂತ್ರ ವಿಸರ್ಜನೆ ತಾಣವಾಗಿದೆ.
–ಬಸವಣ್ಣ ಆರ್ಚಕರ ಚೌಡೇಶ್ವರಿ ದೇಗುಲ
‘ಮತ್ತೆ ಆರಂಭಿಸಿ’
ಇಲ್ಲಿ ಪ್ಲಾಸ್ಟಿಕ್ ಕಸ ರಾಶಿ ಬಿದ್ದಿವೆ ಕಟ್ಟಡ ಸುತ್ತಮುತ್ತ ಮದ್ಯ ಬಾಟಲಿನಿಂದ ಸ್ವಚ್ಛತೆ ಹಾಳಾಗಿದ್ದು ದೇವಸ್ಥಾನಕ್ಕೆ ಬರುವ ಪ್ರವಾಸಿ ಗರಿಗೂ ಸ್ಥಳೀಯರಿಗೂ ಇದರಿಂದ ತೊಂದರೆ ಆಗುತ್ತಿದೆ. ಕಟ್ಟಡ ಆವರಣದ ನಿರ್ವಹಣೆ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಅನೇಕ ಬಾರಿ ಪತ್ರ ವ್ಯವಹಾರ ನಡೆಸಿದರೂ ಸ್ಪಂದನೆ ಲಭಿಸಿಲ್ಲ. ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಉಪಾಹಾರ ಗೃಹ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಲಕಾಡು ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ರಾವ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.