ADVERTISEMENT

ಅರಳಿತು ದಸರಾ ಚಲನಚಿತ್ರೋತ್ಸವ

ಪೃಥ್ವಿ ಅಂಬರ್, ಸಂಧ್ಯಾ ಅರಕೆರೆ ಆಕರ್ಷಣೆ l ಗಾಯಕ ಜಸ್ಕರಣ್‌ ಸಿಂಗ್‌ ಹಾಡಿನ ಮೋಡಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 3:25 IST
Last Updated 14 ಸೆಪ್ಟೆಂಬರ್ 2025, 3:25 IST
ಮೈಸೂರಿನ ‘ಮಾಲ್‌ ಆಫ್ ಮೈಸೂರಿನ’ ‘ಐನಾಕ್ಸ್‌’ ಮಲ್ಟಿಪ್ಲೆಕ್ಸ್‌ನಲ್ಲಿ ಶನಿವಾರ ಆರಂಭವಾದ ದಸರಾ ಚಲನಚಿತ್ರೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಿದರು. ಪುಷ್ಪಾ ಅಮರನಾಥ್, ತನ್ವೀರ್ ಸೇಠ್‌, ಅಂಜಲಿ, ಸಂಧ್ಯಾ ಅರಕೆರೆ, ಪಿ.ಶಿವರಾಜು, ಪೃಥ್ವಿ ಅಂಬರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ 
ಮೈಸೂರಿನ ‘ಮಾಲ್‌ ಆಫ್ ಮೈಸೂರಿನ’ ‘ಐನಾಕ್ಸ್‌’ ಮಲ್ಟಿಪ್ಲೆಕ್ಸ್‌ನಲ್ಲಿ ಶನಿವಾರ ಆರಂಭವಾದ ದಸರಾ ಚಲನಚಿತ್ರೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಚಾಲನೆ ನೀಡಿದರು. ಪುಷ್ಪಾ ಅಮರನಾಥ್, ತನ್ವೀರ್ ಸೇಠ್‌, ಅಂಜಲಿ, ಸಂಧ್ಯಾ ಅರಕೆರೆ, ಪಿ.ಶಿವರಾಜು, ಪೃಥ್ವಿ ಅಂಬರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ    

ಮೈಸೂರು: ಚತುರ್ಭಾಷಾ ತಾರೆ, ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಸವಿನೆನ‍‍‍‍ಪಿನಲ್ಲಿ ‘ದಸರಾ ಚಲನಚಿತ್ರೋತ್ಸವ’ ನಗರದ ‘ಮಾಲ್‌ ಆಫ್ ಮೈಸೂರಿನ’ ‘ಐನಾಕ್ಸ್‌’ ಮಲ್ಟಿಪ್ಲೆಕ್ಸ್‌ನಲ್ಲಿ ಶನಿವಾರ ಬೆಳಿಗ್ಗೆ ಅರಳಿತು. 

ಸಿನಿಮಾ ಪ್ರೇಮಿಗಳು ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು, ‘ಸು ಫ್ರಂ ಸೋ’ ಖ್ಯಾತಿಯ ನಟಿ ಸಂಧ್ಯಾ ಅರಕರೆ, ‘ದಿಯಾ’ ಸಿನಿಮಾದ ನಟ ಪೃಥ್ವಿ ಅಂಬರ್ ಅವರ ಮಾತುಗಳಿಗೆ ಉದ್ಘೋಷ ಮೊಳಗಿಸಿದರೆ, ಗಾಯಕ ಜಸ್ಕರಣ್ ಸಿಂಗ್‌ ಅವರ ಜನಪ್ರಿಯ ‘ಜೇನ ಧ್ವನಿಯೋಳೆ’ ಗೀತೆಗೆ ಕಿವಿಯಾದರು. 

ಸಾಮಾಜಿಕ ಜವಾಬ್ದಾರಿ: 

ADVERTISEMENT

‘ದಸರಾ ಎಂಬುದು ಸಂಭ್ರಮ. ನಾನು ಈ ಊರಿನವಳೇ. ಸಿನಿಮಾದಲ್ಲಿ ಈಗ ಕಲಿಯಲು ಆರಂಭಿಸಿದವರು ನಾವು. ಪುಟ್ಟ ಪಾತ್ರಕ್ಕೆ ಬೆನ್ನು ತಟ್ಟಿದ್ದೀರಿ. ಚೆನ್ನಾಗಿ ಕೆಲಸ ಮಾಡುವ ಜವಾಬ್ದಾರಿ ಕೊಟ್ಟಿದ್ದೀರಿ. ಸಿನಿಮಾ ಎಂದರೆ ಸಾಮಾಜಿಕ ಜವಾಬ್ದಾರಿ. ದಸರೆಯ ಸಿನಿಮೋತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತೋಷ ತಂದಿದೆ’ ಎಂದು ಸಂಧ್ಯಾ ಹೇಳಿದರು. 

ಪೃಥ್ವಿ ಅಂಬರ್ ಮಾತನಾಡಿ, ‘ಪ್ರೇಕ್ಷಕರಿಗೆ ಸದಭಿರುಚಿಯ ಚಿತ್ರಗಳು ಇಂಥ ಚಲನಚಿತ್ರೋತ್ಸವಗಳಲ್ಲಿ ಸಿಗುತ್ತವೆ. ಸಿನಿಮಾ ಸಂಸ್ಕೃತಿ ಬೆಳೆಯಲು ಉತ್ಸವ ನಿರಂತರವಾಗಿ ನಡೆಯಬೇಕು’ ಎಂದರು. 

‘ನಮ್ಮ ಜೀವನದ ಪ್ರತಿ ನಿರ್ಧಾರದಲ್ಲಿಯೂ ಸಿನಿಮಾದ ಪ್ರಭಾವ ದಟ್ಟವಾಗಿ ಇರುತ್ತದೆ. ಹೀಗಾಗಿ, ಸಿನಿಮಾಗಳನ್ನು ಜವಾಬ್ದಾರಿಯುತವಾಗಿ ತೆಗೆಯಬೇಕು. ಒಳ್ಳೆಯ ಬದಲಾವಣೆ ಸಮಾಜದಲ್ಲಿ ಸಿನಿಮಾಗಳಿಂದ ಆಗಿವೆ. ವಿದ್ಯಾರ್ಥಿಗಳು ಚಲನಚಿತ್ರಗಳನ್ನು ನೋಡಬೇಕು’ ಎಂದು ಕೋರಿದರು. 

‘ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಾರಣಕ್ಕಾಗಿಯೇ ಮೈಸೂರೆಂದರೆ ನನಗೆ ಸೆಳೆತ. ಸುಂದರ ಸಾಂಸ್ಕೃತಿಕ ಮನಸ್ಸುಗಳಿವೆ. ಇಲ್ಲಿಯೇ ನೆಲೆಯೂರುವ ಆಸೆಯೂ ಇದೆ’ ಎಂದರು.  

ನಿರ್ಮಾಪಕರಾದ ಜಿ.ಟಿ.ದೇವರಾಜ್, ಜಿ.ಎಸ್.ಜಯತೀರ್ಥ, ಉಡ್‌ಲ್ಯಾಂಡ್‌ ಚಿತ್ರಮಂದಿರದ ಮಾಲೀಕ ಬಿ.ಆರ್.ವೆಂಕಟಾಚಲ, ಕೆ.ಆರ್‌.ನಗರ ಮತ್ತು ಗುಂಡ್ಲುಪೇಟೆಯ ವೆಂಕಟೇಶ್ವರ ಟಾಕೀಸ್‌ ಮಾಲೀಕ ದಶರಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 

ಶಾಸಕರಾದ ತನ್ವೀರ್ ಸೇಠ್‌, ಟಿ.ಎಸ್. ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಅಜಯ್‌ ಕುಮಾರ್, ವಾರ್ತಾ ಇಲಾಖೆ ಉಪ ನಿರ್ದೇಶಕ ಟಿ.ಕೆ.ಹರೀಶ್‌, ಚಲನಚಿತ್ರೋತ್ಸವ ಉಪ ಸಮಿತಿ ಉಪವಿಶೇಷಾಧಿಕಾರಿ ವಿಜಯ್ ಕುಮಾರ್, ಕಾರ್ಯಾಧ್ಯಕ್ಷೆ ಕೆ.ಶೋಭಾ, ನಟಿ ಅಂಜಲಿ, ಸಂಗೀತ ನಿರ್ದೇಶಕ ನಾಗಾರ್ಜುನ ಶರ್ಮಾ, ನೃತ್ಯ ನಿರ್ದೇಶಕ ಮುರುಗ ಪಾಲ್ಗೊಂಡಿದ್ದರು.

ಸಿನಿಮಾ ಪ್ರಭಾವಿ ಮಾಧ್ಯಮ’ 

ಚಲನಚಿತ್ರೋತ್ಸವ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ‘ದೇಶದ ಜನಜೀವನದ ಮೇಲೆ ಸಿನಿಮಾವು ಪ್ರಭಾವ ಬೀರಿದೆ. ರಾಜಕೀಯ ಸಾಮಾಜಿಕ ಜವಾಬ್ದಾರಿ ಹಾಗೂ ಅರಿವನ್ನು ಯುವಕರಲ್ಲಿ ಮೂಡಿಸುತ್ತದೆ’ ಎಂದರು.  ‘ನಟನೆ ಅಭಿನಯ ಸಂಗೀತ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಹತ್ತರ ಮಾಧ್ಯಮವಾಗಿರುವ ಸಿನಿಮಾ ಸಮಾಜಮುಖಿ’ ಎಂದು ವಿಶ್ಲೇಷಿಸಿದರು.  ‘ಬಿ.ಸರೋಜಾದೇವಿ ದಕ್ಷಿಣ ಭಾರತದ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಬಹು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಜನ ಜೀವನದ ಮೇಲೆ ಪ್ರಭಾವ ಬೀರಿದ್ದರು. ಅವರ ನೆನಪಿನಲ್ಲಿ ಉತ್ಸವ ನಡೆಸಲಾಗುತ್ತಿದ್ದು ಈಚೆಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರವು ಘೋಷಿಸಿದೆ’ ಎಂದರು.  ‘ದಸರೆ ಭಾರತೀಯರೆಲ್ಲ ಒಂದೇ ಎಂದು ಸಾರುವ ಜನರ ಹಬ್ಬವಾಗಿದೆ. ಉತ್ಸವದಲ್ಲಿ ಉತ್ತಮ ಚಲನಚಿತ್ರಗಳಿದ್ದು ಅವುಗಳನ್ನು ವೀಕ್ಷಿಸಿ ಉತ್ತಮವಾದ ಅಂಶ ವಿಚಾರಗಳನ್ನು ಗ್ರಹಿಸಿ ಸಾಮಾಜಿಕವಾಗಿ ಸಂಘಟಿತರಾಗಬೇಕು. ಪರಂಪರೆಯನ್ನು ಎತ್ತಿ ಹಿಡಿಯಬೇಕು’ ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.