ADVERTISEMENT

ಅಂಬೇಡ್ಕರ್‌ ಚಿತ್ರಕ್ಕೆ ಮಲ ಬಳಿದು ಅಪಮಾನ

ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವಾಜಮಂಗಲದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 19:16 IST
Last Updated 19 ಏಪ್ರಿಲ್ 2025, 19:16 IST
ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದ ಸಿದ್ಧಾರ್ಥ ಯುವಕ ಸಂಘದ ನಾಮಫಲಕದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಲ ಬಳಿದಿರುವುದು
ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದ ಸಿದ್ಧಾರ್ಥ ಯುವಕ ಸಂಘದ ನಾಮಫಲಕದಲ್ಲಿನ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಲ ಬಳಿದಿರುವುದು   

ಮೈಸೂರು: ತಾಲ್ಲೂಕಿನ ವಾಜಮಂಗಲದಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದ ಬ್ಯಾನರ್‌ಗಳು ಹಾಗೂ ನಾಮಫಲಕವನ್ನು ಶನಿವಾರ ಕಿಡಿಗೇಡಿಗಳು ವಿರೂಪಗೊಳಿಸಿದ್ದು, ‘ಸಿದ್ಧಾರ್ಥ ಯುವಕರ ಸಂಘ’ದ ನಾಮಫಲಕದಲ್ಲಿದ್ದ ಚಿತ್ರಕ್ಕೆ ಮಲ ಬಳಿದು ವಿಕೃತಿ ಮೆರೆದಿದ್ದಾರೆ. ಇದನ್ನು ಖಂಡಿಸಿ ಗ್ರಾಮಸ್ಥರು ಮತ್ತು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.

‘ಗ್ರಾಮದಲ್ಲಿ ಸೋಮವಾರ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅಲ್ಲಿನ ಯುವಕರು, ಶುಭಾಶಯ ತಿಳಿಸುವ ಬ್ಯಾನರ್‌ಗಳನ್ನು ರಸ್ತೆ ಬದಿಯಲ್ಲಿ ಹಾಕಿದ್ದರು. ಶುಕ್ರವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್‌ಗಳಲ್ಲಿನ ಅಂಬೇಡ್ಕರ್‌ ಭಾವಚಿತ್ರವನ್ನು ಬ್ಲೇಡ್‌ ಹಾಗೂ ಚಾಕುವಿನಿಂದ ಹರಿದು ವಿರೂಪಗೊಳಿಸಿದ್ದಾರೆ. ಫಲಕದಲ್ಲಿದ್ದ ಫೋಟೊಗೆ ಮಲ ಬಳಿದಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಗ್ರಾಮದ ಹಾಲಿನ ಡೇರಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು. ಗ್ರಾಮದ ಶಿವು ಎಂಬುವವರು ನೀಡಿದ ದೂರನ್ನು ಆಧರಿಸಿ ವರುಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

‘ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು. ‘ಮಲ ಬಳಿದು ವಿಕೃತಿ ಮೆರೆದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.

‘ಎರಡು ಬೈಕ್‌ಗಳಲ್ಲಿ ಬಂದಿದ್ದ ಮೂವರು ಕೃತ್ಯ ಎಸಗಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಬೈಕ್‌ ನಂಬರ್‌ ಪ್ಲೇಟ್‌ ಕಾಣಿಸುತ್ತಿಲ್ಲ. ಸೌಹಾರ್ದ ಕೆಡಿಸಲು ಯತ್ನಿಸಿದವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ಸಾತಗಳ್ಳಿಯಲ್ಲೂ ಅವಮಾನ: ‘ಹೊರವಲಯದ ಸಾತಗಳ್ಳಿ ಹಂಚ್ಯ ‘ಬಿ’ ವಲಯ ಬಡಾವಣೆಯ ಉದ್ಯಾನದಲ್ಲಿ ಅಂಬೇಡ್ಕರ್ ಅವರ ಹೆಸರು ಮತ್ತು ಫೋಟೊವುಳ್ಳ ಫಲಕವನ್ನು ಬಿಸಾಡಿ ಅವಮಾನ ಮಾಡಲಾಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಪ್ರಕರಣ  ದಾಖಲಿಸಬೇಕು’ ಎಂದು ಸಾತಗಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.