ADVERTISEMENT

ಬಾರದ ಪರಿಹಾರ: ಸಂತ್ರಸ್ತೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 20:49 IST
Last Updated 8 ಮಾರ್ಚ್ 2023, 20:49 IST

ಸರಗೂರು (ಮೈಸೂರು ಜಿಲ್ಲೆ): ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡು ಪರಿಹಾರ ಬಾರದೆ ಅತಂತ್ರವಾಗಿದ್ದ ತಾಲ್ಲೂಕಿನ ದೊಡ್ಡಬರಗಿ ಗ್ರಾಮದ ಕೃಷಿಕ ಮಹಿಳೆ ಚಿಕ್ಕತಾಯಮ್ಮ (42) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

‘ಕಳೆದ ವರ್ಷದ ಅತಿವೃಷ್ಟಿಯಿಂದ ಮನೆ ಕುಸಿದು ಬಿದ್ದಿತ್ತು. ಫಲಾನುಭವಿಗಳ ಪಟ್ಟಿಯಲ್ಲೂ ಅವರ ಹೆಸರಿತ್ತು. ಮರು ಪರಿಶೀಲನೆಗೆ ಬಂದಿದ್ದ ಕಂದಾಯ ಇಲಾಖೆ ಸಿಬ್ಬಂದಿ ಪಟ್ಟಿಯಿಂದ ಹೆಸರನ್ನು ಕೈ ಬಿಟ್ಟಿದ್ದರು. ಸಾಕಷ್ಟು ದಿನ ಕಾದರೂ ಪರಿಹಾರ ಬಂದಿರಲಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕುಸಿದಿದ್ದ ಮನೆಯಲ್ಲೇ ತೆಂಗಿನಗರಿ ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಕುಟುಂಬವು ಬೀದಿಗೆ ಬಿದ್ದಿದೆ. ಮೂರ್ಛೆ ಹೋಗಿದ್ದ ಚಿಕ್ಕತಾಯಮ್ಮ ಅವರ ಪತಿಯನ್ನು ಉಪಚರಿಸಲಾಯಿತು. ಸರಗೂರು ತಾಲ್ಲೂಕಿನಲ್ಲಿ 421 ಫಲಾನುಭವಿಗಳು ಪರಿಹಾರ ಸಿಗದೇ ಅತಂತ್ರರಾಗಿದ್ದಾರೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು’ ಎಂದು ಹೇಳಿದರು.

‘ಈ ಸಂಬಂಧ ದೂರು ಬಂದಿಲ್ಲ. ನಮಗೆ ಮಾಹಿತಿ ಇಲ್ಲ’ ಎಂದು ಸರಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಶ್ರವಣದಾಸರೆಡ್ಡಿ ಹೇಳಿದರು.

ನೆರೆ ಸಂತ್ರಸ್ತೆಗೆ ಸ್ಪಂದಿಸದ ಹಾಗೂ ಪರಿಹಾರ ಕಲ್ಪಿಸದ ಆಡಳಿತದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಪ್ರಕರಣದ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.