ADVERTISEMENT

₹ 65 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಡೀಸೆಲ್ ಹಾಕಿಸುವಾಗ ಹೃದಯಾಘಾತ; ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:55 IST
Last Updated 3 ಮೇ 2019, 4:55 IST

ಮೈಸೂರು: ಇಲ್ಲಿನ ಹೆಬ್ಬಾಳದ ಮೊದಲ ಹಂತದ ಮನೋಹರಸಿಂಗ್ ಎಂಬುವವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ₹ 65 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ₹ 1.4 ಲಕ್ಷ ನಗದನ್ನು ಕಳವು ಮಾಡಿದ್ದಾರೆ.

ಮನೋಹರಸಿಂಗ್ ಅವರು ಏ. 26ರಂದು ರಾಜಸ್ತಾನಕ್ಕೆ ತೆರಳಿದ್ದರು. ಪತ್ನಿ ಹಾಗೂ ಮಗು ಕುವೆಂಪುನಗರದ ತಾಯಿ ಮನೆಯಲ್ಲಿದ್ದರು. ಏ.28ರಂದು ವಾಪಸ್ ಮನೆಗೆ ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ. ಚಿನ್ನಾಭರಣಗಳ ಜತೆಗೆ ಬೀರುವಿನಲ್ಲಿದ್ದ ಆಸ್ತಿ ದಾಖಲೆ ಪತ್ರಗಳು, ಏರ್‌ಗನ್ ಸಹ ಕಳವಾಗಿದೆ.

ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ತೆರಳಿ ಪರಿಶೀಲನೆ ನಡೆಸಿವೆ. ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ADVERTISEMENT

ಡೀಸೆಲ್ ಹಾಕಿಸುವಾಗ ಹೃದಯಾಘಾತ; ಸಾವು

ಮೈಸೂರು: ಡೀಸೆಲ್ ಹಾಕಿಸುವಾಗ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ಜೆ.ಸಿ.ನಗರದ ನಿವಾಸಿ ಎಂ.ವಿ.ಕೃಷ್ಣಕುಮಾರ್ (54) ಬುಧವಾರ ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ಚಾಲಕರಾಗಿರುವ ಇವರು ಬಾಡಿಗೆ ಕಾರನ್ನು ಚಾಲನೆ ಮಾಡಿಕೊಂಡು ಬಂದು ಇಲ್ಲಿನ ಬೋಗಾದಿ ಬಳಿಯ ಪೆಟ್ರೊಲ್ ಬಂಕ್‌ನಲ್ಲಿ ಡಿಸೆಲ್‌ ಹಾಕಿಸುತ್ತಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇವರು ಮೃತಪಟ್ಟಿದ್ದಾರೆ. ಇವರಿಗೆ ಕಳೆದ ಕೆಲ ದಿನಗಳಿಂದ ಎದೆನೋವು ಬರುತ್ತಿತ್ತು. ಗ್ಯಾಸ್ಟಿಕ್ ತೊಂದರೆ ಎಂದು ಭಾವಿಸಿ ಮಾತ್ರೆಗಳನ್ನು ತೆಗೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.

ವ್ಯಕ್ತಿ ಆತ್ಮಹತ್ಯೆ

ಮೈಸೂರು: ಇಲ್ಲಿನ ಬೋಗಾದಿ ನಿವಾಸಿ ಜೆ.ಮಹದೇವ್ (25) ಅನಾರೋಗ್ಯದಿಂದ ಬೇಸತ್ತು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪದೇ ಪದೇ ಆರೋಗ್ಯ ಹದಗೆಡುತ್ತಿತ್ತು. ಇದರಿಂದ ಇವರು ಬೇಸರಗೊಂಡಿದ್ದರು. ಹೀಗಾಗಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಇವರು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.