ADVERTISEMENT

ಕಳವು ಮಾಡಿದ್ದ ಮನೆ ಕೆಲಸದಾಕೆ ಬಂಧನ

ಜೆ.ಎಲ್‌.ಪುರ ಠಾಣಾ ಪೊಲೀಸರ ಕಾರ್ಯಾಚರಣೆ, ₹ 2.56 ಲಕ್ಷ ಚಿನ್ನಾಭರಣಗಳ ವಶ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:58 IST
Last Updated 6 ಮೇ 2019, 19:58 IST
ಆರೋಪಿ ಮಹಿಳೆಯೊಂದಿಗೆ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು
ಆರೋಪಿ ಮಹಿಳೆಯೊಂದಿಗೆ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು   

ಮೈಸೂರು: ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಮಂಜುನಾಥಪುರದ ನಿವಾಸಿ ಆರೋಪಿ ಮಂಗಳಮ್ಮ (45) ಎಂಬಾಕೆಯನ್ನು ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈಕೆಯಿಂದ ₹ 2.56 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯಲಕ್ಷ್ಮೀಪುರಂನ 2ನೇ ಬ್ಲಾಕ್‌ನಲ್ಲಿ ವಾಸವಿದ್ದ ಎಂ.ಎಸ್.ರೇವತಿ ಎಂಬುವವರ ಮನೆಯಲ್ಲಿ ಮಂಗಳಮ್ಮ ಮನೆ ಕೆಲಸ ಮಾಡುತ್ತಿದ್ದಳು. ರೇವತಿ ಅವರು ಮನೆಯ ಬೀರುವಿನಲ್ಲಿಟ್ಟಿದ್ದ ₹ 2.49 ಲಕ್ಷದ ಮೌಲ್ಯದ ಚಿನ್ನ ಹಾಗೂ ₹ 7,650 ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಳು. ಈಕೆ ಕೆಲಸದಿಂದ ಬಿಟ್ಟ ಬಳಿಕ ಹಲವು ದಿನಗಳ ನಂತರ ಕಳವಾಗಿರುವುದು ಗೊತ್ತಾಗಿದೆ. ಆಗ ರೇವತಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಆದರೆ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವುದು ದೊಡ್ಡ ಸವಾಲಾಯಿತು. ಈಕೆ ಗಿರವಿ ಇಟ್ಟಿದ್ದ ವಿವಿಧ ಪಾನ್ ಬ್ರೋಕರ್ಸ್‌ ಅಂಗಡಿಗಳಿಂದ ಆಭರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.‌

ADVERTISEMENT

ಕಾರ್ಯಾಚರಣೆಗೆ ಎನ್.ಆರ್.ವಿಭಾಗದ ಎಸಿಪಿ ಧರಣೇಶ್ ಮಾರ್ಗದರ್ಶನ ನೀಡಿದ್ದರು. ಇನ್‌ಸ್ಪೆಕ್ಟರ್‌ ಎಸ್.ಡಿ.ಸುರೇಶ್‌ಕುಮಾರ್, ಎಎಸ್‌ಐ ಜಯರಾಮು, ಸಿಬ್ಬಂದಿಯಾದ ಉಮೇಶ್, ಬಿ.ಮಂಜುನಾಥ, ಯಶೋಧಾ, ಶಿವಮಲ್ಲು, ರಮೇಶ್, ಮಂಜುನಾಥ್, ಟಿ.ಎಂ.ಪ್ರಶಾಂತ್, ಅಪೂರ್ವಾ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.