ADVERTISEMENT

ಯಶಸ್ವಿಯಾದ ಆಪರೇಷನ್ ‘ಕಾವೇರಿ’

ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 20:18 IST
Last Updated 15 ನವೆಂಬರ್ 2018, 20:18 IST

ಮೈಸೂರು: ರೈಲ್ವೆ ಪೊಲೀಸರು ನಡೆಸಿದ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಕಾವೇರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ‍ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮಂಡ್ಯದ ಹುಲಿವಾನ ಗ್ರಾಮದ ಎಚ್.ಎಂ.ನಾಗರಾಜ ಬಂಧಿತ ವ್ಯಕ್ತಿ. ಈತನಿಂದ ₹ 1.2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಕಾವೇರಿ ರೈಲಿನಲ್ಲಿ ಈಚೆಗೆ ಕಳ್ಳತನಗಳ ಸಂಖ್ಯೆ ಹೆಚ್ಚಾಗಿತ್ತು. ಕೇರಳದ ವೈನಾಡು ಜಿಲ್ಲೆಯ ಶರ್ಲಿ ಎಂಬುವವರು ಅಜ್ಮೀರ- ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಸೋದರಿಯೊಂದಿಗೆ ಪ್ರಯಾಣಿಸುತ್ತಿದ್ದಾಗ ₹ 2,900 ನಗದು, 2 ಚಿನ್ನದ ಚೇನು, 2 ಮೊಬೈಲ್‌ಗಳು, ಕನ್ನಡಕ ಸೇರಿ ₹ 1.33 ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಇಂತಹ ಕೃತ್ಯಗಳನ್ನು ತಡೆಯಲು ರೈಲ್ವೆ ಪೊಲೀಸರು ‘ಆಪರೇಷನ್ ಕಾವೇರಿ’ ಎಂಬ ಕಾರ್ಯಾಚರಣೆ ಕೈಗೊಂಡರು. ನ. 13ರಂದು ಕಾವೇರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡು ಬಂದ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣಗಳ ಕುರಿತು ಆತ ಮಾಹಿತಿ ನೀಡಿದ್ದಾನೆ.

ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್, ಎಸ್‍ಐಆರ್ ಜಗದೀಶ್, ಸಿಬ್ಬಂದಿ ಬಿರೇಶ, ಬಿ.ಎಸ್.ಮೋಹನ, ಆರ್.ಪ್ರಶಾಂತ್, ಮಧು, ಜಗದೀಶ್, ಚುಂಚೇಗೌಡ, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.