ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ– ಸೋಮಶೇಖರ್

ಬೆಳ್ಳಿಗದೆ ನೀಡಿ ಸನ್ಮಾನಿಸಿದ ಕಾರ್ಯಕರ್ತರು, ಮುಖಂಡರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:32 IST
Last Updated 25 ನವೆಂಬರ್ 2020, 3:32 IST
ಬಿಜೆಪಿ ನಗರ ಮತ್ತು ಗ್ರಾಮಾಂತರ ಸಮಿತಿ ವತಿಯಿಂದ ಮೈಸೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದಕ್ಕಾಗಿ ಸನ್ಮಾನಿಸಲಾಯಿತು
ಬಿಜೆಪಿ ನಗರ ಮತ್ತು ಗ್ರಾಮಾಂತರ ಸಮಿತಿ ವತಿಯಿಂದ ಮೈಸೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದಕ್ಕಾಗಿ ಸನ್ಮಾನಿಸಲಾಯಿತು   

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಇಲ್ಲಿ ಮಂಗಳವಾರ ಬಿಜೆಪಿ ನಗರ ಮತ್ತು ಗ್ರಾಮಾಂತರ ಸಮಿತಿ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಹೇಳಿದರು.‌

‘ಈ ಮಾತನ್ನು ತಮಾಷೆಗೆ ಹೇಳಿರುವೆ. ಹೆಚ್ಚು ಪ್ರಚಾರ ಮಾಡಬೇಡಿ. ಈಗಾಗಲೇ ಗೆದ್ದಿರುವ ನನ್ನ ಕ್ಷೇತ್ರದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ’ ಎಂದೂ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಯಾದಾಗ ಅನೇಕ ಸವಾಲುಗಳು ಎದುರಾಗಬಹುದು ಎಂದು ಸಾಕಷ್ಟು ಜನರು ಹೇಳಿದ್ದರು. ಆದರೆ, ಇಲ್ಲಿ ಬಂದು ನೋಡಿದರೆ ಪಕ್ಷದಲ್ಲಿ ಯಾವುದೇ ಗುಂಪುಗಳು ಇರಲಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುವ ನಾಯಕರಿದ್ದರು ಎಂದು ಅವರು ಶ್ಲಾಘಿಸಿದರು.

ADVERTISEMENT

ಸಂಸದ ಪ್ರತಾಪಸಿಂಹ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವ ಮಾಡಿದರು. ನಂತರ, ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಒಪ್ಪಿಗೆ ಪಡೆದೆ. ಈ ಕಾರ್ಯಕ್ಕೆ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಎಲ್ಲೆಡೆ ಜಯ ಗಳಿಸಬೇಕು. ಇದಕ್ಕಾಗಿ ಸಂಘಟನಾ ಚಟುವಟಿಕೆಗಳು ಚುರುಕುಗೊಳ್ಳಬೇಕು ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಕರೆ

ಸಂಸದ ಪ್ರತಾಪಸಿಂಹ ಮಾತನಾಡಿ, ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿದ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿ ಜನರ ಗಮನ ಸೆಳೆಯಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವಂತೆ ಮಾಡಬೇಕು ಎಂದು ಕರೆ ನೀಡಿದರು.

ಹಿಂದಿನ ಸರ್ಕಾರದ ನಾಯಕರು 4 ವರ್ಷಗಳಲ್ಲಿ ಮಾಡುತ್ತಿದ್ದ ಪ್ರವಾಸಗಳನ್ನು ಸೋಮಶೇಖರ್ ಕೇವಲ ಆರೇ ತಿಂಗಳಲ್ಲಿ ಮಾಡಿದ್ದಾರೆ. ಇಲ್ಲಿನ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಬಿಜೆಪಿ ಕಾರ್ಯಕರ್ತರು ‌ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆಯಲ್ಲಿ ಭಾಗಿಯಾಗದೇ ಪಕ್ಷಕ್ಕೆ ಪೂರಕವಾಗಿ ವರ್ತಿಸಬೇಕು. ಸರ್ಕಾರದ ಸಾಧನೆಗಳನ್ನು ಎಲ್ಲೆಡೆ ಪ್ರಚಾರ ಮಾಡಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಸೋಮಶೇಖರ್ ಅವರಿಗೆ ಬೆಳ್ಳಿಗದೆ ಹಾಗೂ ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.

ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ (ಗ್ರಾಮಾಂತರ) ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.