ADVERTISEMENT

ನಿರಪರಾಧಿಯ ಬಂಧನ: ಮೂವರು ಪೊಲೀಸ್‌ ಅಧಿಕಾರಿಗಳ ಅಮಾನತು

ಕೊಲೆ ಮಾಡದಿದ್ದರೂ ‘ನಿರಪರಾಧಿ’ ಸುರೇಶ್‌ ಬಂಧಿಸಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:34 IST
Last Updated 30 ಜೂನ್ 2025, 13:34 IST
ಬಿ.ಜಿ.ಪ್ರಕಾಶ್
ಬಿ.ಜಿ.ಪ್ರಕಾಶ್   

ಮೈಸೂರು: ಪತ್ನಿ ನಾಪತ್ತೆಯಾದ ಕುರಿತು ದೂರು ನೀಡಿದ ಪತಿ ಸುರೇಶ್‌ ವಿರುದ್ಧವೇ, ಪತ್ನಿಯ ಕೊಲೆ ಆರೋಪ ಹೊರಿಸಿ, ಸುಳ್ಳು ಪ್ರಕರಣ ದಾಖಲಿಸಿದ್ದ ಮೂವರು ಪೊಲೀಸ್‌ ಅಧಿಕಾರಿಗಳನ್ನು ಇಲಾಖೆಯು ಅಮಾನತು ಮಾಡಿದೆ. 

ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಿ.ಜಿ.ಪ್ರಕಾಶ್‌, ಮೈಸೂರಿನ ಇಲವಾಲ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಮಹೇಶ್‌ಕುಮಾರ್ ಹಾಗೂ ಜಯಪುರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಪ್ರಕಾಶ್‌ ಎತ್ತಿನಮನಿ ಅವರನ್ನು ಅಮಾನತುಗೊಳಿಸಿ ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣವನ್ನು ಈಚೆಗೆ ಬೆಂಗಳೂರಿನಲ್ಲಿ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರೇಶ್‌ ಅವರು ಎರಡು ವರ್ಷ ಜೈಲು ವಾಸ ಅನುಭವಿಸುವಂತೆ ಮಾಡಿದ್ದ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದರು.  

ADVERTISEMENT

ಹಿನ್ನೆಲೆ: 2020ರ ನವೆಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ಸುರೇಶ್‌ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್‌ ಎಂಬಾತನೇ ಕಾರಣ ಎಂದು ತಿಳಿಸಿದ್ದರೂ, ಬೆಟ್ಟದಪುರದ ಪೊಲೀಸರು ಸುರೇಶ್‌ ಅವರನ್ನೇ ಆರೋಪಿಯಾಗಿಸಿ, ಬಂಧಿಸಿದ್ದರು. ಸುರೇಶ್ ಎರಡು ವರ್ಷ ಜೈಲಿನಲ್ಲಿದ್ದು ವಿಚಾರಣೆ ಎದುರಿಸುವಾಗಲೇ, ಮಲ್ಲಿಗೆ ಪ್ರಿಯಕರನೊಂದಿಗೆ ಪತ್ತೆ ಆಗಿದ್ದರು. 

‘ಜೇನುಕುರುಬ’ ಆದಿವಾಸಿ ಸಮುದಾಯದ ಕುಟುಂಬವಾದ್ದರಿಂದ ‘ಮುಂದೆ ನಮಗೇನು ಸಮಸ್ಯೆ ಆಗುವುದಿಲ್ಲ’ ಎಂದು ಭಾವಿಸಿದ್ದ ಪೊಲೀಸ್‌ ಅಧಿಕಾರಿಗಳು, ಪ್ರಕರಣದುದ್ದಕ್ಕೂ ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಸುರೇಶ್‌ ಅವರನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಿತ್ತು. 

ಸುರೇಶ್‌ ಮೇಲಿನ ಸುಳ್ಳು ಆರೋಪ ಪ್ರಕರಣದ ತನಿಖೆಯ ಹಂತದಲ್ಲಿದ್ದಾಗ, ಬಿ.ಜಿ.ಪ್ರಕಾಶ್ ಬೈಲುಕುಪ್ಪೆಯ ಸರ್ಕಲ್‌ ಇನ್‌ಸ್ಪೆಕ್ಟರ್, ಮಹೇಶ್‌ ಕುಮಾರ್ ಹಾಗೂ ಪ್ರಕಾಶ್‌ ಎತ್ತಿನಮನಿ ಬೆಟ್ಟದಪುರ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿದ್ದರು. 

ಮಹೇಶ್‌ ಕುಮಾರ್
ಪ್ರಕಾಶ್‌ ಎತ್ತಿನಮನಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.