ADVERTISEMENT

ಚೀನಾ ವಿರುದ್ಧ ಟಿಬೆಟನ್ನರ ಪ್ರತಿಭಟನೆ

ದಬ್ಬಾಳಿಕೆ ವಿರುದ್ಧ ಆಕ್ರೋಶ l ಪಂಚೇನ್‌ ಲಾಮಾ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 16:31 IST
Last Updated 11 ಮಾರ್ಚ್ 2024, 16:31 IST
ಟಿಬೆಟನ್ನರ 65ನೇ ರಾಷ್ಟ್ರೀಯ ಬಂಡಾಯ ದಿನದ ಪ್ರಯುಕ್ತ ಭಾನುವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಟಿಬೆಟನ್ನರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ 
ಟಿಬೆಟನ್ನರ 65ನೇ ರಾಷ್ಟ್ರೀಯ ಬಂಡಾಯ ದಿನದ ಪ್ರಯುಕ್ತ ಭಾನುವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಟಿಬೆಟನ್ನರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ    

ಮೈಸೂರು: ಚೀನಾದ ದಮನಕಾರಿ ನೀತಿ ವಿರುದ್ಧ ಟಿಬೆಟನ್‌ ಯುವ ಕಾಂಗ್ರೆಸ್ ಹಾಗೂ ಪ್ರಾಂತೀಯ ಟಿಬೆಟನ್‌ ಮಹಿಳಾ ಸಂಘಟನೆ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ಟಿಬೆಟನ್ನರ 65ನೇ ರಾಷ್ಟ್ರೀಯ ಬಂಡಾಯ ದಿನದ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಚೀನಾ ವಿರುದ್ಧ ಘೋಷಣೆ ಕೂಗಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ತ್ಸೆರಿಂಗ್‌ ಲಕ್ಯಪ್ ಜನ್‌ಯೀಲ್ ಮಾತನಾಡಿ, ‘1959ರ ಮಾರ್ಚ್‌ 10ರಂದು ಲಕ್ಷಾಂತರ ಟಿಬೆಟನ್ನರು ಚೀನಿಯರ ಆಕ್ರಮಣದ ವಿರುದ್ಧ ಲಾಸಾದಲ್ಲಿ ಬೀದಿಗಿಳಿದು ಪ್ರತಿಭಟಿದ್ದರು. ಅಂದಿನಿಂದಲೂ ಪ್ರತಿ ವರ್ಷವೂ ಬಂಡಾಯ ದಿನದ ನೆನಪಿಗಾಗಿ ಟಿಬೆಟನ್ನರು ವಿಶ್ವದಾದ್ಯಂತ ಬೀದಿಗಿಳಿದು ಪ್ರತಿಭಟಿಸುತ್ತಾರೆ’ ಎಂದರು.

ADVERTISEMENT

‘ಚೀನಿಯ ಆಕ್ರಮಣ, ದಬ್ಬಾಳಿಕೆ ಆಡಳಿತದಲ್ಲಿ 12 ಲಕ್ಷ ಟಿಬೆಟನ್ನರು ಪ್ರಾಣ ತ್ಯಾಗ ಮಾಡಿದ್ದಾರೆ. ಚೀನಿಯರು ಟಿಬೆಟನ್ ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಗುರುತನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದ್ದಾರೆ’ ಎಂದರು.

‘ದಲೈಲಾಮಾ ಟಿಬೆಟ್ ಸಮಸ್ಯೆಗೆ ಪರಿಹಾರ ಸೂತ್ರ ಸೂಚಿಸಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಚೀನಾದ ಆಕ್ರಮಣದಿಂದ ಟಿಬೆಟನ್ನರನ್ನು ರಕ್ಷಿಸಬೇಕು. ಡಿಜೆ ವ್ಯಾಗೋ ಗ್ರಾಮದ ಡ್ರಿಜು ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹೊರಟಿರುವ ನಿರ್ಧಾರವನ್ನು ವಾಪಸ್ ಪಡೆಯಬೇಕು. ಅಲ್ಲಿಂದ ಟಿಬೆಟನ್ನರ ಸ್ಥಳಾಂತರ ಮಾಡಬಾರದು’ ಎಂದು ಒತ್ತಾಯಿಸಿದರು.

‘ಕೇಂದ್ರೀಯ ಟಿಬೆಟಿಯನ್ ಆಡಳಿತದೊಂದಿಗೆ ಮಾತುಕತೆಗೆ ಮುಂದಾಗಬೇಕು. ಪಂಚೆನ್ ಲಾಮಾ ಹಾಗೂ ಇತರೆ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು’ ಎಂದರು.

ಬೈಲುಕುಪ್ಪೆ, ಕೊಳ್ಳೇಗಾಲ, ಹುಣಸೂರಿನ ಪ್ರತಿನಿಧಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.