ಹುಣಸೂರು: ತಾಲ್ಲೂಕಿನ ಹನಗೋಡು ಗ್ರಾಮದ ಅಡಿಕೆ ತೋಟದಲ್ಲಿ ಗುರುವಾರ ಮಧ್ಯಾಹ್ನ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಗ್ರಾಮದ ನಿವಾಸಿ ಪಾಷಾ ತಮ್ಮ ಹಸುಗಳನ್ನು ಮುನಿಸ್ವಾಮಿ ಅವರ ಅಡಿಕೆ ತೋಟದಲ್ಲಿ ಮೇಯಿಸುತ್ತಿದ್ದರು. ಜೋಳದ ಹೊಲದಲ್ಲಿ ಅಡಗಿದ್ದ ಹುಲಿಯು ಹಸುವಿನ ಮೇಲೆ ದಾಳಿ ಮಾಡಿ ಸಾಯಿಸಿದೆ. ಪಾಷಾ ಅವರ ಎದುರಿನಲ್ಲೇ ಘಟನೆ ನಡೆದಿದ್ದು ಆತನ ಕೂಗು ಕೇಳಿ ಸುತ್ತಲಿನಲ್ಲಿ ರೈತರು ಮತ್ತು ದನಗಾಹಿಗಳು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪರಾರಿಯಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಸೆರೆಗೆ ಆಗ್ರಹ: ‘ನಾಗರಹೊಳೆ ವೀರನಹೊಸಹಳ್ಳಿ ವಲಯದಂಚಿನ ಪ್ರದೇಶದಲ್ಲಿ ಹುಲಿ ಆಗಿಂದಾಗ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆಯೂ ಜಾನುವಾರುಗಳ ಭೇಟೆಯಾಡಿದೆ. ಇಲಾಖೆಯು ಕೂಡಲೇ ಕಾರ್ಯಾಚರಣೆ ನಡೆಸಿ ಹುಲಿ ಬಂಧಿಸಬೇಕು. ಇಲ್ಲವಾದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟಿಸಲಿದ್ದೇವೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.