ADVERTISEMENT

ತಿ.ನರಸೀಪುರ: ಪ್ರವಾಸಿ ತಾಣವಾಗಲಿ ಆಲಗೂಡು ಕೆರೆ

103 ಎಕರೆ ವಿಸ್ತೀರ್ಣದ ಆಲಗೂಡು ಕೆರೆ; 500 ಎಕರೆ ಪ್ರದೇಶಕ್ಕೆ ನೀರು ಪೂರೈಕೆ

ಎಂ.ಮಹದೇವ್
Published 30 ಆಗಸ್ಟ್ 2021, 2:51 IST
Last Updated 30 ಆಗಸ್ಟ್ 2021, 2:51 IST
ತಿ.ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆಲಗೂಡು ಕೆರೆಯಲ್ಲಿ ಜೊಂಡು ಬೆಳೆದಿದೆ
ತಿ.ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆಲಗೂಡು ಕೆರೆಯಲ್ಲಿ ಜೊಂಡು ಬೆಳೆದಿದೆ   

ತಿ.ನರಸೀಪುರ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಆಲಗೂಡು ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಎಂಬ ಬೇಡಿಕೆ ಈ ಭಾಗದ ಜನರದ್ದು.

ಈ ಕೆರೆಯನ್ನು ‘ಹಿರಿಕೆರೆ’ ಎಂದೂ ಕರೆಯುತ್ತಾರೆ. ಸುಮಾರು 103 ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯ ಕೆಲ ಭಾಗ ಒತ್ತುವರಿಯಾಗಿರುವ ಬಗ್ಗೆ ದೂರುಗಳಿವೆ. ನಾಲೆಗಳಲ್ಲಿ ನೀರು ಹರಿಸಿದಾಗ ಈ ಕೆರೆ ತುಂಬಿ ಆಲಗೂಡು, ತಲಕಾಡು ಮುಖ್ಯ ರಸ್ತೆಯ ಕೆಲ ಜಮೀನು ಹಾಗೂ ಕೇತಹಳ್ಳಿ ಗ್ರಾಮದ ಜಮೀನು ಸೇರಿ 500 ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಹೆಳವರಹುಂಡಿ, ಮುದ್ದುಬೀರನಹುಂಡಿ, ಆಲಗೂಡು ಗ್ರಾಮಗಳ ಅಂತರ್ಜಲ ವೃದ್ಧಿಗೂ ಈ ಕೆರೆಯೇ ಮೂಲವಾಗಿದೆ.

ಕೆರೆಯಲ್ಲಿ ಮೀನುಗಾರಿಕೆಯನ್ನೂ ನಡೆಸಲಾಗುತ್ತಿದ್ದು, ಬೇಸಿಗೆಯಲ್ಲಿ ನೀರು ಕಡಿಮೆಯಾಗ ಗ್ರಾಮಸ್ಥರು ವಿವಿಧ ಸೊಪ್ಪು ಬೆಳೆಯುತ್ತಾರೆ. ಈ ಸೊಪ್ಪಿಗೆ ಬಹು ಬೇಡಿಕೆ ಇದ್ದು, ಒಂದಷ್ಟು ಆದಾಯ ಮಾಡಿಕೊಳ್ಳುತ್ತಾರೆ.

ADVERTISEMENT

ಕೆರೆಯಲ್ಲಿ ವಿಪರೀತ ಜೊಂಡು ಬೆಳೆದು ಕೆರೆಯ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ‘ಜೊಂಡು ಮತ್ತಿತರ ಕಳೆ ತೆಗೆಸಬೇಕು. ಹೂಳು ಎತ್ತಿ, ನೀರು ಹರಿಸಿದರೆ ರೈತರು ವರ್ಷಕ್ಕೆ ಎರಡ್ಮೂರು ಬೆಳೆ ತೆಗೆಯಬಹುದು’ ಎಂಬುದು ಸ್ಥಳೀಯರು ಒತ್ತಾಯಿಸುತ್ತಾರೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಮೈತ್ರಿ ಸರ್ಕಾರದಲ್ಲೂ ಈ ಪ್ರಸ್ತಾವಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇತ್ತು. ಆದರೆ, ಅನುಮೋದನೆಗೂ ಮುನ್ನ ಮೈತ್ರಿ ಸರ್ಕಾರ ಬಿದ್ದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದು ಗ್ರಾಮದ ಮುಖಂಡ ನಾಗರಾಜು
ತಿಳಿಸಿದರು.

‘ಕೆರೆಯಿಂದ ಕೃಷಿ ಜಮೀನಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಮೀನುಗಾರಿಕೆ, ಸೊಪ್ಪು ಬೆಳೆಯಲು ಇದರ ನೀರನ್ನೇ ಬಳಸಲಾಗುತ್ತದೆ. ಜಾನುವಾರುಗಳಿಗೂ ಈ ನೀರೇ ಆಸರೆ. ಕೆರೆ ಸ್ವಲ್ಪ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕು. ಮೈಸೂರಿನ ಕುಕ್ಕರಹಳ್ಳಿ, ಲಿಂಗಾಂಬುಧಿ ಕೆರೆ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಬೇಕು’ ಎಂದು ಗ್ರಾಮಸ್ಥ ಆರ್.ರಮೇಶ್ ಆಗ್ರಹಿಸಿದರು.

ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ

ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿರುವ, ಪುರಸಭಾ ವ್ಯಾಪ್ತಿಗೆ ಬರುವ ಈ ಕೆರೆಯ ಆಸುಪಾಸು ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಕೆರೆಯ ಪಕ್ಕದ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ಜತೆಗೆ ವಾಯುವಿಹಾರಕ್ಕೆ ಸೂಕ್ತ ಪರಿಸರವಿರುವುದರಿಂದ ಕೆರೆ ಅಭಿವೃದ್ಧಿಪಡಿಸಬೇಕು. ಕೆರೆ ಸುತ್ತಲೂ ನಡಿಗೆ ಪಥ ನಿರ್ಮಿಸಬೇಕು. ಇದರಿಂದ ವಾಯುವಿಹಾರಿಗಳ ಓಡಾಟಕ್ಕೂ ಅನುಕೂಲವಾಗುತ್ತದೆ. ಬೋಟಿಂಗ್‌ ವ್ಯವಸ್ಥೆ ಮಾಡಿದರೆ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

***

ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಕೆರೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಭಿವೃದ್ದಿಗೆ ಪೂರಕ ಕ್ರಮ ಕೈಗೊಳ್ಳುತ್ತೇನೆ

–ಬಿ.ಗಿರಿಜಾ, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.