ADVERTISEMENT

ಚಿರತೆ ಸೆರೆಗಾಗಿ ಕಬ್ಬು ಕಟಾವಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 6:04 IST
Last Updated 6 ಡಿಸೆಂಬರ್ 2022, 6:04 IST

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ ಉಂಟು ಮಾಡಿರುವ ಚಿರತೆ ಸೆರೆಗೆ ಕಬ್ಬು ಕಟಾವು ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದೆ.

ಅರಣ್ಯ ಇಲಾಖೆಯು ಸಲ್ಲಿಸಿರುವ ಪ್ರಸ್ತಾವವನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೋಮವಾರ ಆದೇಶ ಹೊರಡಿಸಿದ್ದಾರೆ.

‘ಆ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅಲ್ಲಿ ಸಾರ್ವಜನಿಕರ ಹಾಗೂ ಜೀವಸಂಕುಲಗಳ ಪ್ರಾಣ ಹಾನಿ ತಡೆಯಲು ಮತ್ತು ಸಾರ್ವಜನಿಕರಲ್ಲಿ ಚಿರತೆ ದಾಳಿ ಬಗೆಗಿನ ಭಯ ಹೋಗಲಾಡಿಸಲು ಆ ಪ್ರಾಣಿಯನ್ನು ಸರಹಿಡಿಯಬೇಕಾಗಿದೆ. ಆದ್ದರಿಂದ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೋರಿಕೆಯಂತೆ 23 ಗ್ರಾ.ಪಂ.ಗಳಿಗೆ ಒಳಪಡುವ 40 ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ಆದ್ಯತೆ ಮೇಲೆ ಬೇಗನೆ ಕಟಾವು ಮಾಡಿ ಕಾರ್ಖಾನೆಗೆ ಸಾಗಣೆ ಮಾಡಿಕೊಳ್ಳಬೇಕು’ ಎಂದು ಆದೇಶಿಸಿದ್ದಾರೆ.

ADVERTISEMENT

‘ತುರುಗನೂರು, ಯಾಚನಹಳ್ಳಿ, ಮಾರಗೌಡನಹಳ್ಳಿ, ದಾಸೇಗೌಡನಹಳ್ಳಿ, ಸಿ.ವಿ.ಕೊಪ್ಲು, ಕೇತುಪುರ, ಉಕ್ಕಲಗೆರೆ, ಎಂ.ಎಲ್.ಹುಂಡಿ, ಸೋಮನಾಥಪುರ, ಕಗ್ಗಲೀಪುರ, ದೊಡ್ಡಬಾಗಿಲು, ಹೊರಳಹಳ್ಳಿ, ಕರುಗಹಳ್ಳಿ, ಚಿದರವಳ್ಳಿ, ಎಸ್.ದೊಡ್ಡಪುರ, ಬೋಳೇಗೌಡನಹುಂಡಿ, ಕೆಂಪನಪುರ, ರಾಮೇಗೌಡನಪುರ, ಚಿಕ್ಕಕಲ್ಕುಣಿ, ನರಗ್ಯಾತನಹಳ್ಳಿ, ಹಲವಾರ, ಚಿಟಿಗಯ್ಯನಕೊಪ್ಲು, ನಾಗಲಗೆರೆ, ಮುಸುವಿನಕೊಪ್ಲು, ಸೋಸಲೆ, ಬೆನಕನಹಳ್ಳಿ, ವೀರಪ್ಪೊಡೆಯರ್‌ ಹುಂಡಿ, ಕಾಳಬಸವನ ಹುಂಡಿ, ಕುರುಬಾಳನಹುಂಡಿ, ಗಾಡಿಜೋಗಿಹುಂಡಿ, ಮಾದಿಗಹಳ್ಳಿ, ಸುಜಲೂರು, ಹ್ಯಾಕನೂರು, ತುಂಬಲ, ಯರಗನಹಳ್ಳಿ, ಸೀಹಳ್ಳಿ, ಮಾದಾಪುರ, ಹಿರಿಯೂರು, ಮೂಗೂರು, ಕೂಡ್ಲೂರು ಸೇರಿದಂತೆ 40 ಗ್ರಾಮಗಳಿಗೆ ಆದೇಶ ಅನ್ವಯವಾಗಲಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.