
ಮೈಸೂರು: ಗಂಧದಗುಡಿ ಫೌಂಡೇಷನ್ ಸದಸ್ಯರು ನಗರ ಸಂಚಾರ ಪೊಲೀಸ್ ಸಹಯೋಗದೊಂದಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೆ.ಆರ್. ವೃತ್ತದ ಬಳಿ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಿದರು. ಹೆಲ್ಮೆಟ್ ಧರಿಸದೆ ಬಂದ ಸವಾರರ ಹಿಂಬದಿ ಯಮಧರ್ಮರಾಯನ ವೇಷಧಾರಿ ಕುಳಿತು ಗಮನ ಸೆಳೆದರು.
ಡಿಸಿಪಿ ಕೆ.ಎಸ್.ಸುಂದರ್‌ರಾಜ್, ಸಂಚಾರ ವಿಭಾಗದ ಎಸಿಪಿ ಎಂ.ಶಿವಶಂಕರ್ ವಾಹನ ಸವಾರರಿಗೆ ಗುಲಾಬಿ, ಎಳ್ಳು, ಬೆಲ್ಲ ನೀಡಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ಸುಂದರ್‌ರಾಜ್ ಮಾತನಾಡಿ, ‘ರಸ್ತೆ ಸುರಕ್ಷತಾ ನಿಯಮಗಳನ್ನು ಸವಾರರ ಸುರಕ್ಷತೆಗಾಗಿ ರೂಪಿಸಲಾಗಿದೆ. ಅವನ್ನು ಪಾಲಿಸದಿದ್ದರೆ ಅಪಾಯ ಆಹ್ವಾನಿಸಿಕೊಳ್ಳುತ್ತೀರಿ. ದಂಡ ಹಾಕುತ್ತಾರೆ ಎಂಬ ಭಯಕ್ಕೆ ನಿಯಮ ಪಾಲಿಸದೆ, ನಿಮ್ಮ ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಹೇಳಿದರು.
ದೇವರಾಜ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ವಿ.ಡಿ.ಮಮತಾ, ‘ಸೀಟ್ ಎಡ್ಜ್’ ಚಲನಚಿತ್ರದ ನಾಯಕ ಸಿದ್ದು ಮೂಲಿಮನಿ, ನಟಿ ರವೀಕ್ಷಾ ಶೆಟ್ಟಿ, ಗಂಧದ ಗುಡಿ ಫೌಂಡೇಷನ್ ಅಧ್ಯಕ್ಷ ಆರ್ಯನ್ ಗಂಧದ ಗುಡಿ, ಮನೋಹರ್ ಗೌಡ, ಮೇಘನ್ ರಾಜ್, ಆರ್.ಯಶೋಧಾ, ಅಭಿನಂದನ್ ಅರಸ್, ರಮೇಶ್ ಎಂ.ಪಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.