ADVERTISEMENT

ಮೈಸೂರು | 40 ಮರಗಳ ಹನನ ಪ್ರಕರಣ: ಅನುಮತಿ ನೀಡುವಲ್ಲಿ ಉಲ್ಲಂಘನೆಯಾಗಿಲ್ಲ!

ಎಂ.ಮಹೇಶ್
Published 22 ಮೇ 2025, 5:28 IST
Last Updated 22 ಮೇ 2025, 5:28 IST
ಮೈಸೂರಿನ ಎಸ್‌ಪಿ ಕಚೇರಿ ಸಮೀಪದ ಹೈದರಾಲಿ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಕಡಿದುರುಳಿಸಿರುವುದು (ಸಂಗ್ರಹ ಚಿತ್ರ)
ಮೈಸೂರಿನ ಎಸ್‌ಪಿ ಕಚೇರಿ ಸಮೀಪದ ಹೈದರಾಲಿ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಕಡಿದುರುಳಿಸಿರುವುದು (ಸಂಗ್ರಹ ಚಿತ್ರ)   

ಮೈಸೂರು: ನಗರದ ನಜರ್‌ಬಾದ್‌ನ ಹೈದರಾಲಿ ರಸ್ತೆ ಬದಿಯಲ್ಲಿ ನಳನಳಿಸುತ್ತಾ ಮೆರಗು ನೀಡುತ್ತಿದ್ದ ಬರೋಬ್ಬರಿ 40 ಮರಗಳ ಹನನ ಪ್ರಕರಣದಲ್ಲಿ ಇಲಾಖೆಯಿಂದ ಅನುಮತಿ ನೀಡುವಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅರಣ್ಯ ಇಲಾಖೆಯ ವರದಿ ಹೇಳಿದೆ. ಇದರಲ್ಲಿ, ಸಾರ್ವಜನಿಕರ ಆಕ್ಷೇಪಣೆ ಕೇಳುವ ಅಗತ್ಯವಿರಲಿಲ್ಲ ಎಂದೂ ತಿಳಿಸಲಾಗಿದೆ!

ಈ ಮರಗಳನ್ನು ಕಡಿದು ಹಾಕಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಪರಿಸರ ಪ್ರಿಯರಿಂದ ವ್ಯಕ್ತವಾಗಿದ್ದ ಆಕ್ರೋಶವನ್ನು ಉಲ್ಲೇಖಿಸಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮರಗಳ ಹನನದ ಬಗ್ಗೆ ಮಿಡಿದಿದ್ದರು. ತನಿಖೆ ನಡೆಸಿ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಇದರಂತೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಮೀನಾಕ್ಷಿ ನೇಗಿ ವರದಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈಚೆಗೆ ವರದಿ ಸಲ್ಲಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮಾರ್ಚ್‌ 13ರಂದು ಮರಗಳ ಹನನ ನಡೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು, ‘ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿಯುವುದು ಮನುಷ್ಯರನ್ನು ಕೊಂದಂತೆ ಅಥವಾ ಅದಕ್ಕಿಂತಲೂ ಕೆಟ್ಟದಾದುದು’ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಆದರೆ, ಹೈದರಾಲಿ ರಸ್ತೆಯಲ್ಲಿ 40 ಮರಗಳನ್ನು ಅನಗತ್ಯವಾಗಿ ಮರಗಳನ್ನು ಕಡಿದಿರುವ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದಿದೆ. ಮರ ಕಡಿದ ಜಾಗದಲ್ಲಿ ಸಾವಿರಾರು ಮಂದಿ, ಮೋಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ; ಮೌನ ಪ್ರತಿಭಟನೆಯನ್ನೂ ಮಾಡಿದ್ದಾರೆ’ ಎಂದು ಸಚಿವರು ಉಲ್ಲೇಖಿಸಿದ್ದರು.

ADVERTISEMENT

ಸಮತೋಲನ ಕಾಯ್ದುಕೊಳ್ಳಬೇಕು: ‘ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ವೃಕ್ಷ ಸಂರಕ್ಷಣೆ ಇಲಾಖೆಯ ಕರ್ತವ್ಯವಾಗಿದೆ. ಅಭಿವೃದ್ಧಿಯೂ ಆಗಬೇಕು; ಪರಿಸರ ಪ್ರಕೃತಿಯೂ ಉಳಿಯಬೇಕು. ಈ ರೀತಿ ಸಮತೋಲನ ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಿಜಕ್ಕೂ ಹೈದರಾಲಿ ರಸ್ತೆ ವಿಸ್ತರಣೆ ಅಗತ್ಯವಿತ್ತೇ? ಮರಗಳನ್ನು ಕಡಿಯಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆಯೇ? ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಚಿವ ಖಂಡ್ರೆ ನಿರ್ದೇಶನ ನೀಡಿದ್ದರು.

ಆದರೆ, ಆ ರಸ್ತೆ ವಿಸ್ತರಣೆ (ಕಾಳಿಕಾಂಬಾ ದೇವಸ್ಥಾನದ ಬಳಿಯಿಂದ ಎಸ್‌ಪಿ ಕಚೇರಿ ವೃತ್ತದವರೆಗೆ 360 ಮೀಟರ್ ಉದ್ದದಲ್ಲಿ 30 ಮೀಟರ್‌ ವಿಸ್ತರಣೆಗೆ) ನಿಜಕ್ಕೂ ಅಗತ್ಯವಿತ್ತೇ? ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ವರದಿಯಲ್ಲಿ ನೀಡಿಲ್ಲದಿರುವುದು ಉಬ್ಬೇರುವಂತೆ ಮಾಡಿದೆ! ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ರ ಕಲಂ 8(3)ರ ಅಡಿಯಲ್ಲಿ (ಕಡಿಯುವ ಅನುಮತಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸದಿದ್ದರೂ ಸಹ) ಕಡಿಯಲು ಮಹಾನಗರಪಾಲಿಕೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಲಾಗಿದೆ. ಇದರಲ್ಲಿ ಉಲ್ಲಂಘನೆ ಆಗಿಲ್ಲ ಎಂಬ ಅಭಿಪ್ರಾಯವನ್ನು ಅಧಿಕಾರಿ ವ್ಯಕ್ತಪಡಿಸಿದ್ದಾರೆ.

ಸಚಿವರ ಸೂಚನೆಯಂತೆ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಬ್ಬಂದಿ ಮತ್ತು ನೇಮಕಾತಿ) ಮೈಸೂರು ವೃತ್ತಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಹಾಗೂ ಕಡತಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಕಡಿತಲೆಗೆ ಅನುಮತಿ ನೀಡಿದ ಮರಗಳ ಸಂಖ್ಯೆಯು 50 ಸಂಖ್ಯೆಯ ಒಳಗಡೆ ಇರುವುದರಿಂದಾಗಿ ಕಾಯ್ದೆ ಪ್ರಕಾರ, ಸಾರ್ವಜನಿಕರಿಂದ ಆಕ್ಷೇಪಣೆ ಕರೆಯುವ ಅವಶ್ಯಕತೆ ಇರುವುದಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಕತ್ತರಿಸಲಾದ ಮರಗಳನ್ನು ಸೀವೇಜ್ ಫಾರಂ ಸಮೀಪದ ಡಂಪಿಂಗ್‌ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಈಶ್ವರ ಖಂಡ್ರೆ

ವರದಿಯಲ್ಲೇನಿದೆ?

ಪಾಲಿಕೆ ತೋಟಗಾರಿಕೆ ವಿಭಾಗದ ಎಇಇ 2024ರ ಜೂನ್‌ 15ರಂದು ಮರ ಕಡಿತಲೆಗೆ ಅನುಮತಿ ಕೇಳಿದ್ದರು. ವರದಿ ಸಲ್ಲಿಸಲು ಮೋಜಣಿದಾರರಿಗೆ ಅಂದೇ ಸೂಚಿಸಿದ್ದರು! ಮೈಸೂರು ಉತ್ತರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ–ಕಂ–ಮೋಜಣಿದಾರರು 2024ರ ಜುಲೈ 20ರಂದು ಸ್ಥಳ ಪರಿಶೀಲಿಸಿ ಮರಗಳ ಪಟ್ಟಿ ತಯಾರಿಸಿ ಜುಲೈ 22ರಂದು ವರದಿ ಸಲ್ಲಿಸಿದ್ದರು. ಪಟ್ಟಿಯಂತೆ ರಸ್ತೆ ಬದಿಯ ಎಡಭಾಗದಲ್ಲಿ 28 ಬಲಭಾಗದಲ್ಲಿ 14 ಸೇರಿ ಒಟ್ಟು 40 (38 ಪೆಲ್ಟೊಫೊರಮ್‌ 1 ರೇನ್ ಟ್ರೀ ಹಾಗೂ ಒಂದು ಗೊಬ್ಬಳಿ) ಮರಗಳಿವೆ ಎಂದು ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ವಲಯ ಅರಣ್ಯಾಧಿಕಾರಿಯು 2025ರ ಜ.8ರಂದು ಎಸಿಎಫ್‌ಗೆ ವರದಿ ನೀಡಿದ್ದರು. ಎಸಿಎಫ್‌ ಮರಗಳ ಮೌಲ್ಯಮಾಪನದ ವರದಿಯನ್ನು ಜ.15ರಂದು ಸಲ್ಲಿಸಿದ್ದರು. ಈ ಮಧ್ಯೆ ಇಲಾಖೆಯ ಕೋರಿಕೆ ಮೇರೆಗೆ ಪಾಲಿಕೆಯ ಅಭಿವೃದ್ಧಿ ಅಧಿಕಾರಿಯು ಜ.22ರಂದು ರಸ್ತೆ ವಿಸ್ತರಣೆ ಯೋಜನೆಯ ಸ್ಕೆಚ್ ಸಲ್ಲಿಸಿದ್ದರು. ನಂತರ ₹ 7.76 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುವಂತೆ ಡಿಸಿಎಫ್‌ ಸೂಚಿಸಿದ್ದರು. ಅದರಂತೆ ಪಾಲಿಕೆಯಿಂದ 4 ಡಿಡಿ ಹಾಗೂ 1 ಚೆಕ್‌ ಸಲ್ಲಿಕೆಯಾಗಿತ್ತು. ಹಣ ಪಾವತಿಸಿದ ನಂತರ ಮೈಸೂರು ವಿಭಾಗದ ಡಿಸಿಎಫ್ ಮರಗಳನ್ನು ಕಡಿಯಲು ಮಾರ್ಚ್ 25ರಂದು ಅನುಮತಿ ನೀಡಿದ್ದಾರೆ ಎಂದು ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.