
ಹುಣಸೂರು: ಆದಿವಾಸಿ ಗಿರಿಜನರು ನಾಗರಹೊಳೆ ಬಿಲ್ಲೇನಹಳ್ಳಿ ಭಾಗದ ಅರಣ್ಯಕ್ಕೆ ಪ್ರವೇಶಿಸಿ ತಮ್ಮ ಪೂರ್ವಜರ ಆಚರಿಸುತ್ತಿದ್ದ ಹಂದಿಗೆರೆ ಚೌಡಮ್ಮ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿ ನಮ್ಮ ಕಾಡು ನಮ್ಮ ಹಕ್ಕು ಘೊಷಣೆ ಕೂಗುವ ಮೂಲಕ ಅರಣ್ಯ ಹಕ್ಕು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ತಾಲ್ಲೂಕಿನ ನೇರಳಕುಪ್ಪೆ, ಚಂದನಗಿರಿ, ಬಿಲ್ಲೇನಹಳ್ಳಿಹಾಡಿಯ ಗಿರಿಜನರು ಅರಣ್ಯ ಹಕ್ಕು ಜಾರಿಗೊಳಿಸುವಂತೆ ಆಗ್ರಹಿಸಿ ಅರಣ್ಯ ಪ್ರವೇಶಿಸಿದರು. ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿದರು. ಆದಿವಾಸಿ ಗಿರಿಜನರು ಆಜನ್ಮಸಿದ್ದ ಹಕ್ಕುಗಳನ್ನು ಸರ್ಕಾರ ಕಿತ್ತುಕೊಂಡಿದ್ದು, ನಮ್ಮ ಹಕ್ಕುಗಳನ್ನು ನಮಗೆ ನೀಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಗಿರಿಜನರು ಹಲವು ಬಾರಿ ಭೇಟಿ ಮಾಡಿ ನಮ್ಮ ನೋವು ಹೇಳಿಕೊಂಡಿದ್ದು, ನೀಡಿದ ಭರವಸೆ ಇಂದಿಗೂ ಈಡೇರಿಸಲಿಲ್ಲ. ಗಿರಿಜನರು ತಮ್ಮ ಸ್ವಾತಂತ್ರ್ಯವನ್ನು ಸ್ವತಂತ್ರಯ ಭಾರತದಲ್ಲಿ ಕಳೆದುಕೊಂಡಿರುವುದು ದುಃಖದ ಸಂಗತಿ ಎಂದರು.
ಆದಿವಾಸಿ ಗಿರಿಜನರ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು, ನೆಲಸುಗಳ ಮೇಲಿನ ಹಕ್ಕುಗಳನ್ನು ಮಾನ್ಯ ಮಾಡಿ ಹಕ್ಕುಪತ್ರ ನೀಡಬೇಕು. ಪ್ರತಿಭಟನಾಕಾರರು ಅರಣ್ಯ ಪ್ರವೇಶಿಸುವ ಸಮಯದಲ್ಲಿ ತಮ್ಮ ಜಾನುವಾರುಗಳೊಂದಿಗೆ ಅರಣ್ಯ ನುಗ್ಗಿ ಹಸಿರು ಮೇಯಿಸಿದರು. ಪ್ರತಿಭಟನಾಕಾರರು ಅರಣ್ಯ ಇಲಾಖೆ ಅಧಿಕಾರಿಗೆ ಅರಣ್ಯ ಹಕ್ಕು ಕಾಯ್ದೆ, ಹೈಕೋರ್ಟ್ ಆದೇಶದ ಪ್ರತಿಯೊಂದಿಗೆ ತಮ್ಮ ಮನವಿ ಪತ್ರ ನೀಡಿದರು.
ಚೌಡಮ್ಮ ದೇವರ ಸನ್ನಿದಿಯಲ್ಲಿ ಪ್ರತಿಭಟನಾ ಬಿತ್ತಿ ಪತ್ರವನ್ನು ಪ್ರದರ್ಶಿಸಿದರು. ಅರಣ್ಯದೊಳಕ್ಕೆ ಪ್ರವೇಶಿಸಿದ ಗಿರಿಜನರಿಗೆ ಅರಣ್ಯ ಇಲಾಖೆ ಸಂಪೂರ್ಣ ರಕ್ಷಣೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.