ADVERTISEMENT

ಸಾಹಿತಿಗಳು ಹೃದಯವಂತರಾಗಲಿ

ಸಾಹಿತ್ಯ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ನಾಗಾಭರಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 20:03 IST
Last Updated 13 ಜುಲೈ 2019, 20:03 IST
ಮೈಸೂರು ಸಾಹಿತ್ಯ ಸಂಭ್ರಮವನ್ನು ಪ್ರಮೋದಾದೇವಿ ಒಡೆಯರ್‌ ಉದ್ಘಾಟಿಸಿದರು. ಸ್ಯಾಮ್‌ ಚೆರಿಯನ್, ಶುಭಾ ಸಂಜಯ್‌ ಅರಸ್ ಮತ್ತು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದಾರೆ
ಮೈಸೂರು ಸಾಹಿತ್ಯ ಸಂಭ್ರಮವನ್ನು ಪ್ರಮೋದಾದೇವಿ ಒಡೆಯರ್‌ ಉದ್ಘಾಟಿಸಿದರು. ಸ್ಯಾಮ್‌ ಚೆರಿಯನ್, ಶುಭಾ ಸಂಜಯ್‌ ಅರಸ್ ಮತ್ತು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇದ್ದಾರೆ   

ಮೈಸೂರು: ಸಾಹಿತಿಗಳು ಬುದ್ಧಿವಂತರಾಗುವುದಕ್ಕಿಂತ ಹೃದಯವಂತರಾಗುವುದು ಮುಖ್ಯ ಎಂದು ನಿರ್ದೇಶಕರಾದ ಟಿ.ಎಸ್‌.ನಾಗಾಭರಣ ಅಭಿಪ್ರಾಯಪಟ್ಟರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್‌ ಮತ್ತು ಮೈಸೂರು ಬುಕ್‌ ಕ್ಲಬ್‌ ವತಿಯಿಂದ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಮೈಸೂರು ಸಾಹಿತ್ಯ ಸಂಭ್ರಮ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬುದ್ಧಿ ಬಹಳಷ್ಟು ಸಲ ಕಸರತ್ತು, ವಿವಿಧ ಲೆಕ್ಕಾಚಾರಗಳನ್ನು ಮಾಡುತ್ತದೆ. ಆದರೆ ಹೃದಯ ಬಹಳ ಬೇಗ ಮನುಷ್ಯನನ್ನು ಮನುಷ್ಯನ ಹಾಗೆ ಕಾಣುತ್ತದೆ. ಎಡ– ಬಲ ಎಲ್ಲವುಗಳನ್ನು ದೂರವಿಟ್ಟು ಮಧ್ಯಮ ಮಾರ್ಗದ ಧೋರಣೆಯೊಂದಿಗೆ ಬದುಕನ್ನು ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ADVERTISEMENT

‘ನಾವು ಪರ ಧರ್ಮ, ಪರ ವಿಚಾರಗಳನ್ನು ನಮ್ಮದಾಗಿಸಿಕೊಂಡು ಬಂದಿದ್ದೇವೆ. ನಮ್ಮ ಸಂಸ್ಕೃತಿಯೇ ಅದನ್ನು ಕಲಿಸಿಕೊಟ್ಟಿದೆ. ನಮ್ಮ ಭಾಷೆ, ಜನ, ಸಂಸ್ಕೃತಿಯ ಬಗ್ಗೆ ಹೇಳಿಕೊಳ್ಳುವಾಗ ನಮಗೆ ಹೆಮ್ಮೆಯೆನಿಸುತ್ತದೆ. ಆ ಹೆಮ್ಮೆಯಲ್ಲಿ ಪರ ವಿಚಾರಗಳನ್ನೂ ತಮ್ಮದಾಗಿಸಿಕೊಳ್ಳುತ್ತಾ ಸಾಗಿರುವುದು ವಿಶೇಷ’ ಎಂದರು.

‘ಆದ್ದರಿಂದ ಸಾಹಿತ್ಯ ಸಂಭ್ರಮ ತನ್ನ ಇರುವಿಕೆಯ ಜತೆ ಅರಿವನ್ನು ಮೂಡಿಸುವ ಕೆಲಸ ಮಾಡಬೇಕು. ಮೈಸೂರಿನಲ್ಲಿ ಸತತವಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವ ಟ್ರಸ್ಟ್‌ಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌, ಒಂದು ಸಂಸ್ಥೆ ಅಥವಾ ಸಂಘಟನೆಯ ಯಶಸ್ಸಿಗೆ ದೂರದೃಷ್ಟಿತ್ವ, ಮುಂದಾಲೋಚನೆ, ಕಠಿಣ ಶ್ರಮ ಮತ್ತು ಒಗ್ಗಟ್ಟು ಮುಖ್ಯ. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್‌ ಕಳೆದ ಮೂರು ವರ್ಷಗಳಿಂದ ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿರುವುದು ಸಂತಸದ ವಿಷಯ ಎಂದು ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಲೇಖಕ ಡಾ.ದೇವದತ್ತ ಪಟ್ನಾಯಕ್‌, ಭಾರತೀಯ ಧರ್ಮಗ್ರಂಥಗಳನ್ನು ಅದರಲ್ಲಿರುವ ಸರಿ– ತಪ್ಪು, ಒಳಿತು–ಕೆಡುಕುಗಳ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ‘ಧರ್ಮ’ ಮತ್ತು ‘ಕರ್ಮ’ಗಳಿಂದ ಅರ್ಥಮಾಡಿಕೊಳ್ಳಬೇಕು. ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಧರ್ಮಶಾಸ್ತ್ರದ ಕಲ್ಪನೆಯನ್ನು ಜನರ ಮುಂದಿಡುತ್ತವೆ ಎಂದರು.

ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಇತಿಹಾಸವನ್ನು ತಿಳಿಸುತ್ತದೆ. ವಾಲ್ಮೀಕಿ ಮತ್ತು ವ್ಯಾಸ ಅವರು ಈ ಮಹಾಕಾವ್ಯಗಳ ಭಾಗವಾಗಿದ್ದಾರೆ. ಅಂದರೆ ತಮ್ಮ ಅನುಭವವನ್ನು ಅವರು ಬರೆದುಕೊಂಡಿದ್ದಾರೆ. ಇತಿಹಾಸ ಮತ್ತು ಪುರಾಣಗಳ ನಡುವೆ ವ್ಯತ್ಯಾಸವಿದೆ. ಯಾರೋ ಹೇಳಿದ್ದನ್ನು ಕೇಳಿಸಿಕೊಂಡು ಬರೆದಿರುವುದು ಪುರಾಣಗಳಾಗಿವೆ ಎಂದು ತಿಳಿಸಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಟ್ರಸ್ಟ್ ಆರಂಭಿಸಿರುವ ‘ಎನೇಬಲ್ ಹರ್’ ಯೋಜನೆಗೆ ಪ್ರಮೋದಾದೇವಿ ಅವರು ಚಾಲನೆ ನೀಡಿದರು. ‘ದಿ ಬುಕ್ ಲೀಫ್‌’ ಹೆಸರಿನ ಕೈಪಿಡಿಯನ್ನು ನಾಗಾಭರಣ ಬಿಡುಗಡೆ ಮಾಡಿದರು. ಟ್ರಸ್ಟ್‌ನ ಅಧ್ಯಕ್ಷರಾದ ಶುಭಾ ಸಂಜಯ್‌ ಅರಸ್‌, ಉಪಾಧ್ಯಕ್ಷ ಸ್ಯಾಮ್‌ ಚೆರಿಯನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.