ADVERTISEMENT

ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಶುರು

ಗ್ರಾಮೀಣಕ್ಕಿಂತ ನಗರದಲ್ಲೇ ಹೆಚ್ಚು l ಕಳೆದೊಂದು ವಾರದಲ್ಲಿ 6 ಕಟ್ಟಡಗಳ ತೆರವು: ಪಾಲಿಕೆ ಆಯುಕ್ತ

ಕೆ.ಎಸ್.ಗಿರೀಶ್
Published 6 ಆಗಸ್ಟ್ 2021, 2:20 IST
Last Updated 6 ಆಗಸ್ಟ್ 2021, 2:20 IST
   

ಮೈಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲಿಯೇ ಅನಧಿಕೃತ ಧಾರ್ಮಿಕ ಹಾಗೂ ಇತರೆ ಕಟ್ಟಡಗಳು ಹೆಚ್ಚಿವೆ.

ಜಿಲ್ಲೆಯಲ್ಲಿ ಒಟ್ಟು 157 ಅನಧಿಕೃತ ಕಟ್ಟಡಗಳು ಸಾರ್ವಜನಿಕ ಸ್ಥಳಗಳನ್ನು ಅತಿ
ಕ್ರಮಿಸಿಕೊಂಡಿವೆ. ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲೇ 126 ಕಟ್ಟಡಗಳಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 92 ಕಟ್ಟಡಗಳಿದ್ದರೆ, ಮುಡಾ ವ್ಯಾಪ್ತಿಯಲ್ಲಿ 34 ಇವೆ. ಅವುಗಳನ್ನೆಲ್ಲ ಹಂತಹಂತವಾಗಿ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗುರುವಾರ ಬೆಳಿಗ್ಗೆ ಇಲ್ಲಿನ ನಂಜುಮಳಿಗೆ ರಸ್ತೆಬದಿಯಲ್ಲಿದ್ದ ಸಣ್ಣ ಧಾರ್ಮಿಕ ಕಟ್ಟಡವೊಂದನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.

ADVERTISEMENT

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವಾರ ಇದ್ದ 96 ಕಟ್ಟಡಗಳ ಪೈಕಿ 4 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ವಾರಕ್ಕೆ ವಲಯವಾರು ಕನಿಷ್ಠ 1 ಕಟ್ಟಡಗಳನ್ನು ತೆರವುಗೊಳಿಸಬೇಕು ಎಂಬ ಗುರಿಯನ್ನು ಎಲ್ಲ ವಲಯ ಆಯುಕ್ತರಿಗೆ ನೀಡಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ‘ಎರಡು ತಿಂಗಳ ಒಳಗೆ ಎಲ್ಲ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯತ್ನಿಸಲಾಗುವುದು. 9 ವಲಯ ಕಚೇರಿಗೂ ತಮ್ಮ ವ್ಯಾಪ್ತಿಯಲ್ಲಿ ವಾರಕ್ಕೆ ಒಂದೊಂದು ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿದೆ. ಕಳೆದೊಂದು ವಾರದಲ್ಲಿ 6 ಕಟ್ಟಡಗಳು ತೆರವಾಗಿವೆ’ ಎಂದು ತಿಳಿಸಿದರು.

ಅನಧಿಕೃತ ಕಟ್ಟಡಗಳಿಗೆ ಸಂಬಂಧಿ ಸಿದವರು ಪ್ರತಿಭಟನೆ ನಡೆಸಬಹುದು ಎಂಬ ಕಾರಣಕ್ಕೆ ನಸುಕಿನ 3ರಿಂದ ಬೆಳಿಗ್ಗೆ 6 ಗಂಟೆಯೊಳಗೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಆ ವೇಳೆ ಹೆಚ್ಚಿನ ಭದ್ರತೆ ಕೈಗೊಳ್ಳಲು ಪೊಲೀಸರಿಗೂ ಸೂಚಿಸಲಾಗಿದೆ.

ಅರಳಿಮರದ ಬುಡದಲ್ಲಿ ನಿರ್ಮಿಸಲಾಗಿರುವ ಪುಟ್ಟ ದೇಗುಲಗಳು, ರಸ್ತೆಬದಿ ಇರುವ ಪುಟ್ಟ ಗುಡಿಗಳೇ ಈ ಪಟ್ಟಿಯಲ್ಲಿ ಹೆಚ್ಚಿವೆ ಎಂದು ಮೂಲಗಳು ಇವೆ.

ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ‍್ರೀಂಕೋರ್ಟ್‌ ಆದೇಶ ನೀಡಿ 12 ವರ್ಷಗಳೇ ಕಳೆದಿವೆ. ಹೈಕೋರ್ಟ್‌ ಸಹ 2020ರ ಡಿಸೆಂಬರ್‌ನಲ್ಲಿ ಸೂಚನೆ ನೀಡಿದೆ. ಹೀಗಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಜಿಲ್ಲಾಧಿಕಾರಿಗೆ ಪತ್ರ ಬರೆದು ತೆರವಿಗೆ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.