ADVERTISEMENT

ವಿ.ವಿ: ಏಕರೂಪ ಪಠ್ಯಕ್ರಮಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 19:36 IST
Last Updated 12 ಜೂನ್ 2020, 19:36 IST

ಮೈಸೂರು: ಎಲ್ಲ ವಿಶ್ವವಿದ್ಯಾಲಯಗಳಿಗೂ ಏಕರೂಪದ ಪಠ್ಯಕ್ರಮ ರೂಪಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ವಿಶ್ರಾಂತ ಕುಲಪತಿಗಳ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

‘ಈ ಕ್ರಮದಿಂದ ವಿಶ್ವವಿದ್ಯಾಲಯಗಳ ವೈವಿಧ್ಯತೆ ನಾಶವಾಗುತ್ತದೆ. ಸ್ವಾಯತ್ತೆಗೆ ಕೊಡಲಿಪೆಟ್ಟು ಬೀಳುತ್ತದೆ’ ಎಂದು ವೇದಿಕೆಯ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ವಿಶ್ರಾಂತ ಕುಲಪತಿ ಎನ್‌.ಎಸ್‌.ರಾಮೇಗೌಡ ಮಾತನಾಡಿ, ‘ಮೈಸೂರು ವಿಶ್ವವಿದ್ಯಾಲಯದಲ್ಲಿರುವ ‘ಥಿಯರೆಟಿಕಲ್ ಫಿಸಿಕ್ಸ್’ ಬೇರೆ ವಿಶ್ವವಿದ್ಯಾಲಯಗಳಲ್ಲಿಲ್ಲ. ಇದೇ ರೀತಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ಇರುವ ವಿಶಿಷ್ಟ ಬಗೆಯ ಕೋರ್ಸ್‌ಗಳು ಇಲ್ಲಿಲ್ಲ. ಬೋಧನೆಯಲ್ಲಿ ಏಕರೂಪ ಇಲ್ಲದ ಮೇಲೆ ಪಠ್ಯಕ್ರಮದಲ್ಲಿ ಏಕರೂಪ ತರುವ ಚಿಂತನೆಯೇ ಸರಿಯಲ್ಲ' ಎಂದರು.

ADVERTISEMENT

ವಿಶ್ರಾಂತ ಕುಲಪತಿ ಪ್ರೊ.ಜೆ.ಎ.ಕೆ.ತರೀನ್, ‘ಆನ್‌ಲೈನ್‌ ಶಿಕ್ಷಣ ನೀಡಲೂ ವಿಶ್ವವಿದ್ಯಾಲಯಗಳು ಸಿದ್ಧತೆ ಮಾಡಿಕೊಂಡಿಲ್ಲ. ವಿಜ್ಞಾನದಂತಹ ವಿಷಯಗಳ ಬೋಧನೆ ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ. ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿರುವ ಅಧ್ಯಾಪಕ ವೃಂದ ಆನ್‌ಲೈನ್‌ ಶಿಕ್ಷಣ ಪಡೆದಿಲ್ಲ’ ಎಂದು ಹೇಳಿದರು.

ವಿಶ್ವವಿದ್ಯಾಲಯಗಳ ನಡುವೆ ಸಿಬ್ಬಂದಿ ವರ್ಗಾವಣೆಗಾಗಿ ಸರ್ಕಾರ ಈ ರೀತಿ ಮಾಡಿರಬಹುದು ಎಂದು ವಿಶ್ರಾಂತ ಕುಲಪತಿ ವೆಂಕಟರಾಮ್ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.