ಮೈಸೂರು: ‘ಮೇಲ್ವರ್ಗದ ಜನರು ಅಂಬೇಡ್ಕರ್ ಸಂವಿಧಾನವನ್ನು ಕಾನೂನಿನ ಭಯದಿಂದಷ್ಟೆ ಒಪ್ಪಿಕೊಳ್ಳುತ್ತಿದ್ದಾರೆ. ಹೃದಯದಿಂದ ಸ್ವೀಕರಿಸಿಲ್ಲ’ ಎಂದು ಬೆಳಗಾವಿ ಜಿಲ್ಲೆಯ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಶಿವಯೋಸ್ವಾಮಿ ಗದ್ದುಗೆ ಹಾಗೂ ಮನೆ ಮಂಚಮ್ಮ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಶಿವಯೋಗಿ ಸ್ವಾಮಿಯವರ 78ನೇ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಬುದ್ದನ ನಂತರ ಬಿದ್ದವರನ್ನು ಎತ್ತಿದ ಬಸವಣ್ಣ ಶೋಷಿತರಿಗೆ ಸ್ಥಾನಮಾನ ಒದಗಿಸಿದರು. ಇವತ್ತು ರಾಜಕೀಯ, ಧರ್ಮಕ್ಕೆ ಬಸವಣ್ಣ ಅವರನ್ನು ಬಳಸುತ್ತಿದ್ದಾರೆ. ಲಿಂಗ ಯಾರ ಸ್ವತ್ತಲ್ಲ ಯಾರು ಸಂಸ್ಕಾರ ಸ್ವೀಕರಿಸುವರೋ ಅವರದ್ದು ಎಂಬುದನ್ನು ಎಲ್ಲರೂ ತಿಳಿಯಬೇಕು. ಹನ್ನೆರಡನೇ ಶತಮಾನದಲ್ಲಿ ಅಸ್ಪೃಶ್ಯ ಸ್ವಾಮೀಜಿಗಳಾದ ನಮ್ಮನ್ನು ಒಪ್ಪಿಕೊಂಡರು. ದಲಿತ ಸಮುದಾಯದವರೇ ಲಿಂಗಾಯತ ಇದು ನಿಮ್ಮ ಧರ್ಮ. ಗಟ್ಟಿಯಾಗಿ ಹಿಡಿದುಕೊಳ್ಳಿ.’ ಎಂದು ಕರೆ ನೀಡಿದರು.
‘ಎಲ್ಲರೂ ನಿಂಬೆ ಹಣ್ಣು ನೀಡುವವರನ್ನು ನಂಬುತ್ತಾರೆ. ಜ್ಞಾನದ ಹಾದಿ ತೋರಿಸುವವರನ್ನು ಸ್ವೀಕರಿಸುವುದಿಲ್ಲ. ಶಾಸಕನಾದವನು ಜನರಿಗೆ ಶಿಕ್ಷಣ, ನೀರು, ಅರಿವು, ರಸ್ತೆ, ವಿದ್ಯುತ್ ವ್ಯವಸ್ಥೆ ದೊರಕಿಸಿಕೊಡಬೇಕು. ಹೀಗಾದಾಗ ಮತದಾರರೇ ದೇವರಾಗುತ್ತಾರೆ. ಬದಲಾಗಿ ಆತ ಕೇರಳದ ಜ್ಯೋತಿಷಿ ಬಳಿ ಹೋಗಿ ಗೆಲುವುಗಿ ಪ್ರಾರ್ಥಿಸುವುದಲ್ಲ, ಮಹಾತ್ಮರ ಮಾತು ಕೇಳದೆ ಜ್ಯೋತಿಷಿ ಗಳ ಮಾತು ಕೇಳಬೇಕೆ’ ಎಂದು ಪ್ರಶ್ನಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಭಯದ ವಾತಾವರಣವಿದೆ. ಧರ್ಮದ ಭೂತ ಇಟ್ಟುಕೊಂಡು ದೇಶ ಹಾಳುಗೆಡವಲಾಗುತ್ತಿದೆ. ನಾವು ಇನ್ನೂ ಎಚ್ಚರಗೊಳ್ಳದಿದ್ದರೆ ಮತ್ತೆ ಪುನಃ ವೈದಿಕತೆ, ಪೂಜೆ ಮೆರೆಯುತ್ತದೆ. ಬಸವಣ್ಣ ಅವರನ್ನು ಉಳಿಸಲು ನಮ್ಮಿಂದ ಸಾಧ್ಯ. ರಾಜಕಾರಣಕ್ಕಾಗಿ ಧರ್ಮವನ್ನು ಪ್ರವೇಶ ಮಾಡಬಾರದು’ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಶಾಂತವೇರಿ ಮರುಘ ರಾಜೇಂದ್ರ ಸ್ವಾಮೀಜಿ, ಬಸವಭೃಂಗೇಶ ಸ್ವಾಮೀಜಿ, ಜಯದೇವಿ, ಚಿನ್ಮಯಿ, ಬಸವ ನಾಗದೇವ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.