ADVERTISEMENT

UPSC: ಸತತ ಓದು, ಪರಿಶ್ರಮದಿಂದ ಯಶಸ್ಸು; 812ನೇ ರ್‍ಯಾಂಕ್‌ ಗಳಿಸಿರುವ ಡಿ.ಆನಂದ್‌

ಎಚ್‌.ಕೆ. ಸುಧೀರ್‌ಕುಮಾರ್
Published 24 ಏಪ್ರಿಲ್ 2025, 5:52 IST
Last Updated 24 ಏಪ್ರಿಲ್ 2025, 5:52 IST
   

ಮೈಸೂರು: ‘ಸತತ ಪರಿಶ್ರಮ ಮತ್ತು ಭಿನ್ನವಾಗಿ ಆಲೋಚಿಸುವ ಕ್ರಮ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ನೀಡುತ್ತದೆ.’

ಇದು 2024ರ ಸಾಲಿನ ಯುಪಿಎಸ್‌ಸಿ ನಾಗರಿಕ ಸೇವಾ ‍ಪರೀಕ್ಷೆಯಲ್ಲಿ 812ನೇ ರ್‍ಯಾಂಕ್‌ ಗಳಿಸಿರುವ, ನಗರದ ಶ್ರೀರಾಮಪುರಂ ನಿವಾಸಿ ತನಕ ಡಿ.ಆನಂದ್‌ ಅವರ ಅಭಿಪ್ರಾಯ.

‘ಕಠಿಣ ಓದು, ದೃಢ ನಿರ್ಧಾರ ವಂತೂ ಅತ್ಯಗತ್ಯ. ದಿನದಲ್ಲಿ ಕನಿಷ್ಠ 6 ಗಂಟೆ ಓದಿನಲ್ಲಿ ತೊಡಗುತ್ತಿದ್ದೆ. ಈಗಾಗಲೇ ಪರೀಕ್ಷೆ ಎದುರಿಸಿದ, ಯಶಸ್ಸು ಗಳಿಸಿದ ಹಿರಿಯ ವಿದ್ಯಾರ್ಥಿ ಗಳು ನೀಡುವ ಸಲಹೆ ಹೆಚ್ಚು ಸಹಕಾರಿ ಯಾಗಿರುತ್ತದೆ’ ಎಂದರು.

ADVERTISEMENT

33 ವರ್ಷದ ತನಕ ಅವರು ಆಶಾಲತಾ, ದಿ. ಕೆ.ಎ. ದಿವಾಕರ್‌ ಅವರ ಪುತ್ರ. ನಗರದ ಮರಿಮಲ್ಲಪ್ಪ ಕಾಲೇಜಿ ನಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪೂರೈಸಿ, ಜಯಚಾಮರಾಜೇಂದ್ರ ಎಂಜಿನಿಯ ರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್‌ ವಿಭಾಗದಲ್ಲಿ 2014ರಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

6 ತಿಂಗಳು ಸಾಫ್ಟ್‌ವೇರ್‌ ಕಂಪನಿ ಯಲ್ಲಿಯೂ ಕಾರ್ಯನಿರ್ವಹಿಸಿದ್ದ ಅವರು ಬಳಿಕ ಸ್ನೇಹಿತರ ಸಹಭಾಗಿತ್ವ ದಲ್ಲಿ ಸ್ವಂತ ಕಂಪನಿಯನ್ನು ಸ್ಥಾಪಿಸಿದ್ದರು. 2018ರಲ್ಲಿ ಅದನ್ನು ಸ್ಥಗಿತಗೊಳಿಸ ಬೇಕಾಗಿ ಬಂದಿತ್ತು. ಬಳಿಕ ಯುಪಿಎಸ್‌ಸಿ ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದರು. ಕುವೆಂಪು ನಗರದ ನವೋದಯ ಫೌಂಡೇಷನ್‌ನ ನವೋ– ಪ್ರಮತಿ ತರಬೇತಿ ಸಂಸ್ಥೆ ಯಲ್ಲಿ ವಿದ್ಯಾರ್ಥಿ ಯಾಗಿ ಸೇರಿ, ಅಲ್ಲಿಯೇ ‘ಸಾಮಾಜಿಕ ಸಮಸ್ಯೆಗಳು’ ವಿಷಯದ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಾ ಪರೀಕ್ಷೆ ಎದುರಿಸಿದ್ದಾರೆ.

6ನೇ ಪ್ರಯತ್ನ: ಸತತ 6ನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ. 2 ಬಾರಿ ಪ್ರಿಲಿಮ್ಸ್‌ನಲ್ಲಿಯೇ ಹೊರಗುಳಿದಿದ್ದು, 2 ಬಾರಿ ಮೇನ್ಸ್‌, 2 ಬಾರಿ ಸಂದರ್ಶನ ಎದುರಿಸಿದ್ದಾರೆ.

ಮೈಸೂರು ಸಿದ್ಧವಾಗಬೇಕು: ‘ನಗರದಲ್ಲಿ ಯುಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅಗತ್ಯ ವಾತಾವರಣ ಬೇಕಿದೆ. ಈಗೀಗ ಸ್ವಲ್ಪ ಅಭಿವೃದ್ಧಿ ಹೊಂದುತ್ತಿದ್ದು, ಇನ್ನಷ್ಟು ತೀವ್ರಗೊಳ್ಳಬೇಕು’ ಎನ್ನುತ್ತಾರೆ ತನಕ.

‘ಹೈದರಾಬಾದ್‌, ಬೆಂಗಳೂರು, ದೆಹಲಿಯಂಥ ನಗರಗಳಲ್ಲಿ ತರಬೇತಿ ಪಡೆಯುತ್ತಿರುವವರು, ಯುಪಿಎಸ್‌ಸಿ ತಯಾರಿಯಲ್ಲಿ ಇರುವವರು ನಿಮಗೆ ಒಂದೆಡೆ ಸಿಗುತ್ತಾರೆ. ಪರೀಕ್ಷೆ ಯಶಸ್ಸಿಗೆ ಸಹಪಾಠಿಗಳೊಂದಿಗಿನ ಒಡನಾಟ ಮುಖ್ಯವಾಗುತ್ತದೆ. ನೀವು ಯಾವ ಹಂತದಲ್ಲಿದ್ದೀರಾ ಎಂಬುದರ ಅರಿವು ಮೂಡುತ್ತದೆ’ ಎಂದರು.

ನವೋ– ಪ್ರಮತಿ ಸಂಸ್ಥೆ ಸನ್ಮಾನ

ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಕುವೆಂಪುನಗರದ ನವೋದಯ ಫೌಂಡೇಷನ್‌ನ ನವೋ– ಪ್ರಮತಿ ತರಬೇತಿ ಸಂಸ್ಥೆಯಿಂದ ತನಕ ಡಿ.ಆನಂದ್‌ ಅವರನ್ನು ಅಭಿನಂದಿಸಲಾಯಿತು.

ಮುಡಾ ಆಯುಕ್ತ ರಘುನಂದನ್ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲನೇ ಬಾರಿಗೆ ಸ್ಥಾನ ಪಡೆಯಲಾಗದಿದ್ದರೂ ನಮ್ಮ ಶ್ರಮ ವ್ಯರ್ಥವಾಗುವುದಿಲ್ಲ. ಸತತ ಪ್ರಯತ್ನ ಮುಂದುವರಿದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ’ ಎಂದರು.

ಸಂಸ್ಥೆಯ ಸಂಚಾಲಕ ಎಸ್.ಫಣಿರಾಜ್ ಮಾತನಾಡಿ, ‘ಸಂಸ್ಥೆಯ ವಿದ್ಯಾರ್ಥಿಗಳಾದ ತನಕ ಡಿ.ಆನಂದ್‌ ಹಾಗೂ ಎಸ್‌.ಪಿ.ಲಾವಣ್ಯ (969ನೇ ರ್‍ಯಾಂಕ್‌) ಅವರ ಫಲಿತಾಂಶ ಉಳಿದವರಲ್ಲಿ ಭರವಸೆ ಮೂಡಿಸಿದೆ’ ಎಂದರು.

ಸಂಸ್ಥೆಯ ಸಂಚಾಲಕ ಎಸ್.ಆರ್.ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.