ಮೈಸೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿ ಡಾ.ಎ.ಎನ್.ಕಾಂತರಾಜು ಮತ್ತು ಅವರ ತಂಡ ಜಿಲ್ಲೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಇಡ್ಲಿ ತಯಾರಿಸಲು ಕ್ಯಾನ್ಸರ್‌ಕಾರಕ ಪ್ಲಾಸ್ಟಿಕ್ ಹಾಳೆ ಬಳಸುತ್ತಿರುವವರ ವಿರುದ್ಧ 59 ಪ್ರಕರಣ ದಾಖಲಾಗಿದ್ದು, ಎಂಟು ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗಿದೆ.
ರಾಜ್ಯ ಸರ್ಕಾರವು ಆಹಾರ ತಯಾರಿಕೆಯಲ್ಲಿನ ಅಪಾಯಕಾರಿ ಅಂಶಗಳನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದು, ತಕ್ಷಣವೇ ಕಾರ್ಯಪ್ರವೃತ್ತವಾದ ಅಧಿಕಾರಿಗಳ ತಂಡ ಒಂದು ವಾರದಿಂದ ವಿವಿಧ ಹೋಟೆಲ್ ಹಾಗೂ ಬೀದಿ ಬದಿ ಆಹಾರ ತಯಾರಿಸುವ ಮಳಿಗೆಗಳಿಗೆ ಭೇಟಿ ನೀಡಿ, ತಯಾರಿಕಾ ವಿಧಾನ ಪರಿಶೀಲಿಸಿದೆ. ಇಡ್ಲಿ ತಯಾರಿಸಲು ಬಟ್ಟೆಯ ಬದಲಾಗಿ ಪ್ಲಾಸ್ಟಿಕ್ ಬಳಸುತ್ತಿರುವ 51 ಮಂದಿಗೆ ನೋಟಿಸ್ ನೀಡಿದ್ದಾರೆ.
‘ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಇಡ್ಲಿ ಹೇಗೆ ತಯಾರಿಸುತ್ತಾರೆ ಎಂಬುದನ್ನು ಪರಿಶೀಲಿಸಿದ್ದೇವೆ. ಕೆಲವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದ್ದು, ಎಂಟು ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದ್ದೇವೆ. ಹಸಿರು ಬಟಾಣಿಯಲ್ಲಿ ಕೃತಕ ಬಣ್ಣ ಬಳಸುವ ಬಗ್ಗೆಯೂ ಆರೋಪಗಳಿದ್ದು, ಐದು ಕಡೆಯಿಂದ ಹಸಿರು ಬಟಾಣಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಿದ್ದೇವೆ. ಅದರ ವರದಿ ಆಧರಿಸಿ ಕ್ರಮ ವಹಿಸುತ್ತೇವೆ’ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿ ಕಾಂತರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.