ADVERTISEMENT

ಬಿಜೆಪಿ ನೂರು ದಿನದ ಸಾಧನೆ ಶೂನ್ಯ: ಬಿಜೆಪಿ ವಿರುದ್ಧ ಯು.ಟಿ.ಖಾದರ್ ಟೀಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 9:31 IST
Last Updated 25 ನವೆಂಬರ್ 2019, 9:31 IST
ಮಾಜಿ ಸಚಿವ ಯು.ಟಿ. ಖಾದರ್‌
ಮಾಜಿ ಸಚಿವ ಯು.ಟಿ. ಖಾದರ್‌   

ಹುಣಸೂರು: ಬಿಜೆಪಿ ನೂರು ದಿನ ಆಡಳಿತ ನಡೆಸಿದ್ದರೂ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ಬಳಿ ಹೋಗಲು ‌‌‌‌ಸಿದ್ದರಾಮಯ್ಯ ಅವರನ್ನು ಟೀಕಿಸುವ ಅಸ್ತ್ರ ಬಳಸುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮೂಲ ಕಾರಣವಾದ ಬಿಜೆಪಿ, ಅಧಿಕಾರದ ಗದ್ದುಗೆ ಏರಿದ ಬಳಿಕ ಜನಸಾಮಾನ್ಯರಿಗೆ ಹೊಸ ಯೋಜನೆಗಳ ಕೊಡುಗೆ ನೀಡಲಿಲ್ಲ. ರಾಜ್ಯದಲ್ಲಿ ಎದುರಾದ ಪ್ರಾಕೃತಿಕ ವಿಕೋಪವನ್ನೂ ಸಮರ್ಥವಾಗಿ ನಿಭಾಯಿಸಲಿಲ್ಲ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ₹ 10 ಸಾವಿರ ನೀಡಲಾಗಿದೆ. ಉಳಿದಂತೆ, ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಈವರೆಗೂ ಸಿಕ್ಕಿಲ್ಲ. ಉಪಚುನಾವಣೆಯಲ್ಲಿ ಜನರ ಎದುರು ಹೋಗಲು ಮುಖ್ಯಮಂತ್ರಿ ಹೆದರಿದ್ದಾರೆ’ ಎಂದು ದೂರಿದರು.

ರಾಜ್ಯದಿಂದ 25 ಸಂಸದರು ಗೆದ್ದು ಹೋಗಿದ್ದರೂ, ನೆರೆಹಾವಳಿ ಪ್ರದೇಶಕ್ಕೆ ಪ್ರಧಾನ ಮಂತ್ರಿಯನ್ನು ಕರೆತಂದು ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ₹35 ಸಾವಿರ ಕೋಟಿ ನಷ್ಟವಾಗಿದ್ದರೂ ಕೇಂದ್ರ ನೀಡಿದ್ದ ಕೇವಲ ₹1,300 ಕೋಟಿ ಎಂದರು.

ADVERTISEMENT

ಅನರ್ಹ ಶಾಸಕರು ಯಡಿಯೂರಪ್ಪ ಸರ್ಕಾರಕ್ಕೆ ಊರುಗೋಲಾಗಿದ್ದಾರೆ. ಈ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಿಜೆಪಿಗೆ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಡಿ.9ರ ನಂತರದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಅಲೆ ಸೃಷ್ಟಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆಲುವು ನಿಶ್ಚಿತ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮತದಾರರ ಮನಸ್ಸಿನಲ್ಲಿ ಸ್ಥಿರವಾಗಿ ಉಳಿದಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್‌, ಮುಖಂಡ ಶಿವಯ್ಯ, ಅಯೂಬ್ ಖಾನ್‌, ದೀಪಕ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.