ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಕದಳಿ ಮಹಿಳಾ ವೇದಿಕೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕದಳಿಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು: ‘ವಚನ ಸಾಹಿತ್ಯ ಜೀವನದ ಸಂವಿಧಾನ. ಶರಣರು ರಚಿಸಿರುವ ವಚನಗಳಲ್ಲಿ ಮೌಲ್ಯಯುತ ಬದುಕನ್ನು ನಡೆಸಲು ಬೇಕಾದಂತಹ ಮಾರ್ಗದರ್ಶನವಿದೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಪರಿಷತ್ತಿನ ನಗರ ಹಾಗೂ ಜಿಲ್ಲಾ ಘಟಕ, ಕದಳಿ ಮಹಿಳಾ ವೇದಿಕೆಯಿಂದ ಭಾನುವಾರ ನಡೆದ ಕದಳಿ ಶ್ರೀ ಪ್ರಶಸ್ತಿ ಪ್ರದಾನ ಮತ್ತು ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ...’ ಎನ್ನುವ ವಚನವೊಂದೇ ಸಾಕು ಮಾನವ ಹೇಗೆ ಬದುಕಬೇಕು ಎಂದು ತಿಳಿಸಿಕೊಡಲು. ವಚನ ಸಾಹಿತ್ಯ ತಿದ್ದುಪಡಿ ಮಾಡಲಾಗದ ಸಂವಿಧಾನ’ ಎಂದರು.
‘ಪೋಷಕರು ಮಕ್ಕಳಿಗೆ ವಚನ ಸಾಹಿತ್ಯ ತಿಳಿಸುವ ಮೂಲಕ ಜೀವನ ಮೌಲ್ಯ ಕಲಿಸಬೇಕು. ಶರಣರ ಆದರ್ಶಗಳನ್ನು ಹಿರಿಯ ನಾಗರಿಕರು ಕಲಿತು ತಮ್ಮಲ್ಲೆ ಇಟ್ಟುಕೊಂಡರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಿಗೆ ಕಲಿತ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಬೇಕು. ಇದರಿಂದ ಅವರ ಭವಿಷ್ಯವೂ ಚೆನ್ನಾಗಿ ಇರುತ್ತದೆ, ಮುಂದಿನ ಪೀಳಿಗೆಗೂ ವಚನ ತಲುಪಿಸಿದಂತಾಗುತ್ತದೆ’ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಉದ್ಘಾಟಿಸಿ, ‘ಸಂಘ-ಸಂಸ್ಥೆಗಳ ಮೂಲಕ ಅಕ್ಕ ಮಹಾದೇವಿ ಸೇರಿದಂತೆ ಶರಣರ ಸ್ಮರಣೆ ಮಾಡಿದರೆ ಸಾಲದು. ಅವರ ಆದರ್ಶ ಜೀವನ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.
‘ವೈರಾಗ್ಯ ನಿಧಿ– ಜಗದ ಸೋಜಿಗ’ ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ‘ಆದರೆ’ ಎನ್ನುವುದು ಹೋದರೆ ಜೀವನ ಸುಂದರವಾಗಿರುತ್ತದೆ. ಬದುಕಿನಲ್ಲಿ ಭ್ರಷ್ಟಾಚಾರ, ಕಪಟ, ಗರ್ವ, ಲಂಪಟತೆ ಮುಂತಾದ ಅನೈತಿಕ ಅಂಶಗಳಿಗೆ ಜಾಗ ನೀಡದೇ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಪದ್ಮಶ್ರೀ ಪುರಸ್ಕೃತ ವೈದ್ಯೆ ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಕಾರ್ಯದರ್ಶಿ ವಾಗ್ದೇವಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹಾಜರಿದ್ದರು.
ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯನ್ನು ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸುವ ಆಲೋಚನೆ ಇದೆ. ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ.– ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.