ADVERTISEMENT

₹3 ಕೋಟಿ ಅನುದಾನ ಬಿಡುಗಡೆಗೆ ಕ್ರಮ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ವಾಲ್ಮೀಕಿ ಭವನ ಕಾಮಗಾರಿ ಪರಿಶೀಲಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:19 IST
Last Updated 6 ಡಿಸೆಂಬರ್ 2025, 6:19 IST
ತಿ.ನರಸೀಪುರ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಮಹರ್ಷಿ ವಾಲ್ಮೀಕಿ ಭವನ ಕಾಮಗಾರಿಯನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹಾಗೂ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಈಚೆಗೆ ಪರಿಶೀಲಿಸಿದರು
ತಿ.ನರಸೀಪುರ ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಮಹರ್ಷಿ ವಾಲ್ಮೀಕಿ ಭವನ ಕಾಮಗಾರಿಯನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಹಾಗೂ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಈಚೆಗೆ ಪರಿಶೀಲಿಸಿದರು   

ತಿ.ನರಸೀಪುರ: ಪಟ್ಟಣದ ಶ್ರೀರಾಂಪುರದಲ್ಲಿರುವ ತಾಲ್ಲೂಕು ನಾಯಕರ ಸಂಘದ ಆವರಣದಲ್ಲಿ ಅಪೂರ್ಣಗೊಂಡಿರುವ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬುಧವಾರ ಪರಿಶೀಲಿಸಿದರು.

ಬಳಿಕ ಸಂಘದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ‘ನನೆಗುದಿಗೆ ಬಿದ್ದಿರುವ ವಾಲ್ಮೀಕಿ ಭವನ ಕಾಮಗಾರಿ ಪೂರ್ಣಗೊಳಿಸಲು ₹3 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು’ ಎಂದು ತಿಳಿಸಿದರು.

‘ಮೊದಲ ಬಾರಿ ಸಚಿವನಾದ ವೇಳೆ ಸಂಘದ ಆವರಣದಲ್ಲಿ ಸಮುದಾಯ ಭವನಕ್ಕೆ ಅನುದಾನ ಕೊಟ್ಟು ಕಾಮಗಾರಿಗೆ ಚಾಲನೆ ನೀಡಿದ್ದೆ, ಇದುವರೆಗೂ ₹1.50 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಅಥವಾ ಮಹರ್ಷಿ ವಾಲ್ಮೀಕಿ ಭವನಗಳಿಗೆ ₹6 ಕೋಟಿ ವರೆಗೂ ಅವಕಾಶವಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮುಂದುವರಿದ ಕಾಮಗಾರಿಗೆ ₹3 ಕೋಟಿ ಹೆಚ್ಚುವರಿ ಅನುದಾನ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಈ ಬಗ್ಗೆ ಯೋಜನೆ ರೂಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಕೂಡಲೆ ಕಾಮಗಾರಿ ಪ್ರಾರಂಭಿಸಿ ವರ್ಷದೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ತಾಲ್ಲೂಕು ಕೇಂದ್ರವಾದ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭವನ ಪೂರ್ಣಗೊಳ್ಳದ ಬಗ್ಗೆ ಸಿಎಂ  ಬಳಿ ಪ್ರಸ್ತಾಪಿಸಿ, ಅನುದಾನ ಮಂಜೂರು ಮಾಡಲು ಮನವಿ ಮಾಡುತ್ತೇನೆ. ಸಚಿವರ ಆಶಯದಂತೆ ವರ್ಷದೊಳಗೆ ವಾಲ್ಮೀಕಿ ಭವನ ಉದ್ಘಾಟನೆಯನ್ನು ನೆರವೇರಿಸಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.

ಈ ವೇಳೆ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಅಧ್ಯಕ್ಷ ಹೊನ್ನನಾಯಕ ಅವರು ಮನವಿ ಸಲ್ಲಿಸಿದರು.

ಜಿ.ಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ಎಂ.ಡಿ.ಬಸವರಾಜು, ಗೌರವಾಧ್ಯಕ್ಷ ಮಂಜುನಾಥನ್, ಕಾರ್ಯದರ್ಶಿ ಆಲಗೂಡು ನಾಗರಾಜು, ಉಪಾಧ್ಯಕ್ಷ ಎಚ್. ಹೊನ್ನಯ್ಯ, ನೌಕರರ ಸಂಘದ ಅಧ್ಯಕ್ಷ ಆರ್.ರಾಜು, ಖಜಾಂಚಿ ಗೋವಿಂದರಾಜು, ಸಹಕಾರ್ಯದರ್ಶಿ ಇಂಡವಾಳು ಬಸವರಾಜು, ನಿರ್ದೇಶಕರಾದ ಕೆಬ್ಬೆ ಸುಂದರ, ಗವಿನಾಯಕ, ಸುಂದರ ನಾಯಕ, ಸಿದ್ದರಾಜು ಬೂದಹಳ್ಳಿ, ಹೊನ್ನನಾಯಕ, ಇಂದ್ರೇಶ್, ಸುಂದರ್, ಕುಮಾರ ಕೊಳತ್ತೂರು, ಆರ್‌ಪಿ ಹುಂಡಿ ನಾಗರಾಜು, ಮುಖಂಡರಾದ ಎಂ.ಬಿ.ಸಾಗರ್, ಕೃಷ್ಣನಾಯಕ, ರಾಘವೇಂದ್ರ, ಕೆಬ್ಬೆ ನಾಗಣ್ಣ, ಎಜೆ ವೆಂಕಟೇಶ್, ಕರಿಯಪ್ಪ, ವಾಸು, ಕುಮಾರ, ಪುಟ್ಟು, ಗದ್ದೆಮೊಳೆ ಸಿದ್ದರಾಜು ಇದ್ದರು.