ADVERTISEMENT

ಮೈಸೂರು: ‘ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 12:14 IST
Last Updated 19 ಮಾರ್ಚ್ 2023, 12:14 IST
ಮೈಸೂರಿನ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಸೋಮೇಶ್ವರನಾಥ ಸ್ವಾಮೀಜಿ ಅವರಿಗೆ ಸರ್ಕಾರಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಹಾಗೂ ಸಹ ನಿರ್ದೇಶಕ (ಅಭಿವೃದ್ಧಿ) ಆರ್. ರಘುನಂದನ್ ಮತ್ತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೈಜೋಡಿಸಿದರು. ಪ್ರಾಂಶುಪಾಲ ಡಾ.ನಾಗರಾಜು ಹಾಗೂ ಆಡಳಿತಾಧಿಕಾರಿ ಯಶೋದಾ ಇದ್ದಾರೆ
ಮೈಸೂರಿನ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಸೋಮೇಶ್ವರನಾಥ ಸ್ವಾಮೀಜಿ ಅವರಿಗೆ ಸರ್ಕಾರಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಹಾಗೂ ಸಹ ನಿರ್ದೇಶಕ (ಅಭಿವೃದ್ಧಿ) ಆರ್. ರಘುನಂದನ್ ಮತ್ತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೈಜೋಡಿಸಿದರು. ಪ್ರಾಂಶುಪಾಲ ಡಾ.ನಾಗರಾಜು ಹಾಗೂ ಆಡಳಿತಾಧಿಕಾರಿ ಯಶೋದಾ ಇದ್ದಾರೆ   

ಮೈಸೂರು: ‘ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ’ ಎಂದು ಸರ್ಕಾರಿ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲ ಹಾಗೂ ಸಹ ನಿರ್ದೇಶಕ (ಅಭಿವೃದ್ಧಿ) ಆರ್.ರಘುನಂದನ್ ಹೇಳಿದರು.

ಇಲ್ಲಿನ ಕುವೆಂಪುನಗರ ಬಿಜಿಎಸ್ ಬಿ.ಇಡಿ. ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭದ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

‘ನರ್ಸಿಂಗ್ ಹಾಗೂ ಶಿಕ್ಷಕ ವೃತ್ತಿಗಳೆರಡೂ ಅತ್ಯಂತ ಪವಿತ್ರವಾದವು. ನರ್ಸಿಂಗ್ ವೃತ್ತಿಯಲ್ಲಿರುವವರು ಮನುಷ್ಯನನ್ನು ಶುಶ್ರೂಷೆ ಮಾಡಿದರೆ ಶಿಕ್ಷಕ ವೃತ್ತಿಯಲ್ಲಿರುವವರು ವಿದ್ಯೆ ಕಲಿಸಿ, ಬದುಕಿಗೆ ದಾರಿದೀಪವಾಗುತ್ತಾರೆ’ ಎಂದು ತಿಳಿಸಿದರು.

ADVERTISEMENT

ವಿದ್ಯಾರ್ಥಿ ಸಂಘ ಉದ್ಘಾಟಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ‘ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಂತಿರಬೇಕು. ಸೃಜನಶೀಲತೆ ಅರಳಿಸಬೇಕು. ನೀತಿ ಶಿಕ್ಷಣದ ಮಹತ್ವ ತಿಳಿಸಬೇಕು. ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಓದುವ ಅಭಿರುಚಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಿಸರ ಸಂರಕ್ಷಣೆ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ‘ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಿ.ಇಡಿಗೆ ದಾಖಲಾಗಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ನಾಲ್ಕು ಗೋಡೆಯ ಮಧ್ಯ ಇರಬೇಕು ಎಂಬ ಕಾಲ ಹೋಗಿದೆ. ಪ್ರಸ್ತುತ ಹೆಚ್ಚೆಚ್ಚು ಕಲಿತು ಸಾಧನೆ ಮಾಡುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವುದು ಸ್ವಾಗತಾರ್ಹ’ ಎಂದು ತಿಳಿಸಿದರು.

ಬಿಜಿಎಸ್ ಬಿ.ಇಡಿ. ಕಾಲೇಜಿನ ಆಡಳಿತಾಧಿಕಾರಿ ಯಶೋದಾ ಮಾತನಾಡಿದರು. ಪ್ರಾಂಶುಪಾಲ ಡಾ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.