ADVERTISEMENT

ಮೈಸೂರು | ವರಮಹಾಲಕ್ಷ್ಮಿ ಹಬ್ಬದ ಖರೀದಿ; ಮಾರುಕಟ್ಟೆಗಳಲ್ಲಿ ಜನಜಂಗುಳಿ

ವರಮಹಾಲಕ್ಷ್ಮಿ ಸಂಭ್ರಮ; ಕನಕಾಂಬರ, ಏಲಕ್ಕಿ ಬಾಳೆ ದುಬಾರಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:46 IST
Last Updated 8 ಆಗಸ್ಟ್ 2025, 2:46 IST
ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಚಿಕ್ಕಗಡಿಯಾರ ವೃತ್ತದಲ್ಲಿ ಹೂ–ಹಣ್ಣು ಖರೀದಿಗೆ ನೆರೆದ ಗ್ರಾಹಕರು ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಚಿಕ್ಕಗಡಿಯಾರ ವೃತ್ತದಲ್ಲಿ ಹೂ–ಹಣ್ಣು ಖರೀದಿಗೆ ನೆರೆದ ಗ್ರಾಹಕರು ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಹಿಳೆಯರ ದಂಡೇ ನೆರೆದಿದ್ದು, ಎಲ್ಲೆಲ್ಲೂ ಖರೀದಿ ಸಂಭ್ರಮ ಕಂಡುಬಂದಿತು.

ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ ವೃತ್ತವು ಬೆಳಿಗ್ಗೆಯಿಂದಲೇ ಗ್ರಾಹಕರಿಂದ ಗಿಜಿಗುಡುತ್ತಿತ್ತು. ಸಂಜೆಯಾಗುತ್ತಲೇ ಕೊಳ್ಳುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ಕಾಲಿಡಲು ಜಾಗವಿಲ್ಲದಂತಾಯಿತು. ನಗರದ ಅಗ್ರಹಾರ, ನಂಜುಮಳಿಗೆ ಮೊದಲಾದ ಮಾರುಕಟ್ಟೆಗಳೂ ಜನರಿಂದ ತುಂಬಿದ್ದವು. ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕ ಹೂವು, ಬಾಳೆಕಂದುಗಳನ್ನು ರಾಶಿ ಹಾಕಿ ಮಾರುವ ದೃಶ್ಯ ಸಾಮಾನ್ಯವಾಗಿತ್ತು.

ಹಬ್ಬದ ಕಾರಣಕ್ಕೆ ಹೂವುಗಳ ಬೆಲೆಯು ಸಾಮಾನ್ಯ ದಿನಗಳಿಗಿಂತ ಹಲವು ಪಟ್ಟು ದುಪ್ಪಟ್ಟಾಗಿತ್ತು. ಅದರಲ್ಲಿಯೂ ಕನಕಾಂಬರ ಬೆಲೆ ಎಂದಿನಂತೆ ಗಗನಮುಖಿ ಆಗಿದ್ದು, ₹ 1,500– ₹1,600ರ ಸರಾಸರಿ ದರದಲ್ಲಿ ಮಾರಾಟವಾಯಿತು. ಗ್ರಾಹಕರು ಗ್ರಾಂಗಳ ಲೆಕ್ಕದಲ್ಲಿ ಹೂವು ಖರೀದಿಸಿ ತೃಪ್ತಿಪಟ್ಟರು. ಮಲ್ಲಿಗೆ, ಕಾಕಡ, ಸೇವಂತಿಗೆ, ಸುಗಂಧರಾಜ, ಚೆಂಡುಹೂ ಸೇರಿದಂತೆ ಎಲ್ಲ ಹೂವು ದುಬಾರಿ ಆಗಿದ್ದವು. ಪ್ರತಿ ಮಾರಿಗೆ ಸೇವಂತಿಗೆ ₹150ರಂತೆ, ಮಲ್ಲಿಗೆ ₹ 200ರಂತೆ ವ್ಯಾಪಾರವಾಯಿತು.

ADVERTISEMENT

ನಗರದ ದೇವರಾಜ ಮಾರುಕಟ್ಟೆಯ ಹೊರ ಆವರಣ ಹಾಗೂ ಅಕ್ಕ‍ಪಕ್ಕದ ಪ್ರದೇಶಗಳು ಬಾಳೆ ಗೊನೆಗಳಿಂದಲೇ ತುಂಬಿದ್ದವು. ಅದರಲ್ಲೂ ಪೂಜೆಗೆ ಹೆಚ್ಚಾಗಿ ಬಳಸುವ ಏಲಕ್ಕಿ ಬಾಳೆ ಮತ್ತಷ್ಟು ದುಬಾರಿ ಆಗಿದ್ದು, ಪ್ರತಿ ಕೆ.ಜಿ.ಗೆ ₹120ರವರೆಗೂ ವ್ಯಾಪಾರವಾಯಿತು. ಲಕ್ಷ್ಮಿಗೆ ಪ್ರಿಯವಾದ ತಾವರೆ ಹೂವಿನ ಖರೀದಿಗೂ ಜನರು ಆಸಕ್ತಿ ತೋರಿದ್ದು, ಜೋಡಿ ತಾವರೆಗೆ ₹100–₹ 150ರವಗೂ ಮಾರಾಟವಾಯಿತು. ಇದಲ್ಲದೇ ಬಾಳೆಕಂದು, ಮಾವಿನ ಸೊಪ್ಪು, ಬಗೆಬಗೆಯ ಹಣ್ಣುಗಳ ಖರೀದಿಯೂ ಜೋರಿತ್ತು.

ಮನೆಗಳಲ್ಲಿ ಲಕ್ಷ್ಮಿ ಮೂರ್ತಿಯ ಪ್ರತಿಷ್ಠಾಪನೆಗೆ ಬೇಕಾದ ಸಾಮಗ್ರಿಗಳ ಖರೀದಿಗೂ ಮಹಿಳೆಯರು ಆಸಕ್ತಿ ತೋರಿದರು. ಲಕ್ಷ್ಮಿ ಮುಖವಾಡ, ವಿವಿಧ ನಮೂನೆಯ ಬಳೆಗಳು, ಅಲಂಕಾರಿಕ ಸಾಮಗ್ರಿಗಳು, ಅರಿಶಿನ–ಕುಂಕುಮ, ವೀಳ್ಯದೆಲೆ ಮೊದಲಾದವುಗಳ ಖರೀದಿಯೂ ಜೋರಾಗಿ ನಡೆಯಿತು.

ಮಹಾಲಕ್ಷ್ಮಿ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದ ಮಹಿಳೆ – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ತಾವರೆ ಹೂವಿಗೆ ಬೇಡಿಕೆ | ರಸ್ತೆಯ ಅಕ್ಕಪಕ್ಕದಲ್ಲೂ ಹೂ ಮಾರಾಟ ಜೋರು | ಅಲಂಕಾರಿಕ ಸಾಮಗ್ರಿಗಳ ಖರೀದಿಗೆ ಆಸಕ್ತಿ
ಕನಕಾಂಬರ ಬೆಲೆ ಕೇಳಿಯೇ ಗಾಬರಿಯಾಯಿತು. ಪ್ರತಿ ಹಬ್ಬದ ಮುನ್ನಾ ದಿನ ಹೂವಿನ ಬೆಲೆ ದುಪ್ಪಟ್ಟಾಗುತ್ತಿದ್ದು ಗ್ರಾಂ ಲೆಕ್ಕದಲ್ಲಿ ಖರೀದಿಸಬೇಕಿದೆ
ಗಾಯತ್ರಿ ಸರಸ್ವತಿಪುರಂ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.