
ಮೈಸೂರು: ನಗರೀಕರಣದ ಪ್ರಭಾವಕ್ಕೆ ನಲುಗಿರುವ ವರುಣ ಕೆರೆಯನ್ನು ನೈಸರ್ಗಿಕ ಜೈವಿಕ ವ್ಯವಸ್ಥೆ (ಎನ್‌ಬಿಎಸ್) ತಂತ್ರಜ್ಞಾನದ ಮೂಲಕ ಶುದ್ಧೀಕರಣಗೊಳಿಸುವ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ಈ ಸಂಬಂಧ ₹9.75 ಕೋಟಿ ವೆಚ್ಚದ ಯೋಜನೆಗೆ ಜಲಸಂಪನ್ಮೂಲ ಇಲಾಖೆಯು ಈಚೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮೈಸೂರು ತಾಲ್ಲೂಕಿನ ವರುಣ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ವರುಣ ಕೆರೆಯು ಸುಮಾರು 164 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇಲ್ಲಿಂದ 106 ಎಕರೆಯಷ್ಟು ಕೃಷಿ ಜಮೀನಿಗೆ ನೀರಾವರಿ ವ್ಯವಸ್ಥೆಯೂ ಇದ್ದು, ಕೃಷಿಗೂ ಆಧಾರವಾಗಿದೆ.
ಈಚೆಗೆ ಇಲ್ಲಿ ಜಲಸಾಹಸ ಕ್ರೀಡೆ ಚಟುವಟಿಕೆಗಳೂ ನಡೆದಿದ್ದು, ಪ್ರವಾಸಿ ತಾಣವಾಗಿಯೂ
ಗುರುತಿಸಿಕೊಂಡಿದೆ.
ನಗರ ಬೆಳೆದಂತೆಲ್ಲ ವರುಣ ಕೆರೆಗೆ ಸುತ್ತಲಿನ ಪ್ರದೇಶಗಳ ಮಲಿನ ನೀರು ಸೇರತೊಡಗಿದೆ. ಚಿಕ್ಕಳ್ಳಿ, ವಾಜಮಂಗಲ ಗ್ರಾಮಗಳಿಗೆ ಹೊಂದಿಕೊಂಡಿರುವ ವಿವಿಧ ಬಡಾವಣೆಗಳಿಂದ ಕಲುಷಿತ ನೀರು ಹರಿದ ಪರಿಣಾಮ ಇಡೀ ಕೆರೆ ಮಲಿನವಾಗಿದೆ. ಕೆರೆಯ ನೀರಿನ ಗುಣಮಟ್ಟ ಪರಿಶೀಲಿಸಿದ್ದು, ‘ಡಿ’ ವರ್ಗಕ್ಕೆ ಸೇರಿರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿ ನೀಡಿತ್ತು. ಕೆರೆಯಲ್ಲಿನ ದುರ್ವಾಸನೆಯಿಂದಾಗಿ ಪ್ರವಾಸೋದ್ಯಮ ಚಟುವಟಿಕೆಗೂ ಅಡ್ಡಿ ಆಗಿತ್ತು.
ಈ ಹಿನ್ನೆಲೆಯಲ್ಲಿ ಕೆರೆ ಶುದ್ಧೀಕರಣ ಹಾಗೂ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸಿ ಕಾವೇರಿ ನೀರಾವರಿ ನಿಗಮವು ಜಲಸಂಪನ್ಮೂಲ ಇಲಾಖೆಗೆ ಒಟ್ಟು ₹14.75 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಸಲ್ಲಿಸಿತ್ತು. ನೈಸರ್ಗಿಕ ವಿಧಾನದ ಮೂಲಕವೇ ಕೆರೆ ಶುದ್ಧೀಕರಣದ ಜೊತೆಗೆ ಮತ್ತೆ ಮಲಿನ ನೀರು ಕೆರೆಯ ಒಡಲು ಸೇರಿದಂತೆ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
ಎಂ.ಕೆ. ಸವಿತಾ ಅವರು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದಾಗ ಪ್ರಸ್ತಾವ
ಸಲ್ಲಿಸಲಾಗಿತ್ತು. ಅದಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೂ ಸಮ್ಮತಿಸಿದ್ದರು. ಯೋಜನೆಯಡಿ ವರುಣ ಕೆರೆಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.