ADVERTISEMENT

ತರಕಾರಿ, ಮೊಟ್ಟೆ ಹೂಗಳು ದುಬಾರಿ

ಬಡವರು, ಮಧ್ಯಮವರ್ಗದವರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 9:39 IST
Last Updated 26 ನವೆಂಬರ್ 2019, 9:39 IST
ಈರುಳ್ಳಿ
ಈರುಳ್ಳಿ   

ಪಟ್ಟಿ,

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 12;15

ADVERTISEMENT

ಬೀನ್ಸ್ ; 10; 10

ಕ್ಯಾರೆಟ್; 40 ; 43

ಎಲೆಕೋಸು; 12; 15

ದಪ್ಪಮೆಣಸಿನಕಾಯಿ; 38; 32

ಬದನೆ ; 35; 32

ನುಗ್ಗೆಕಾಯಿ; 14; 22

ಹಸಿಮೆಣಸಿನಕಾಯಿ; 20; 20

ಈರುಳ್ಳಿ; 55; 70

ಮೈಸೂರು: ತರಕಾರಿಗಳು ಹಾಗೂ ಹೂಗಳ ಧಾರಣೆ ಈ ವಾರ ದುಬಾರಿಯಾಗಿದ್ದು, ಬಡವರು ಮತ್ತು ಮಧ್ಯಮವರ್ಗದವರು ಖರೀದಿಸಲು ಪರದಾಡುವ ಸನ್ನಿವೇಶ ಎದುರಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಸುರಿಯುತ್ತಿರುವ ಇಬ್ಬನಿಯಿಂದ ಹೂಗಳ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ಒಂದೆಡೆ ಮಾರಕಟ್ಟೆಗೆ ಬರುತ್ತಿರುವ ಹೂವಿನ ಆವಕದಲ್ಲಿ ಕಡಿಮೆಯಾದರೆ ಮತ್ತೊಂದೆಡೆ ಕಡೆ ಕಾರ್ತೀಕ ಸೋಮವಾರದ ಪ್ರಯುಕ್ತ ಹೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ.

‘ಸಾಮಾನ್ಯವಾಗಿ ಕೆ.ಜಿಗೆ ₹ 120ಕ್ಕೆ ಮಾರಾಟವಾಗುತ್ತಿದ್ದ ಸೇವಂತಿಗೆ ಈಗ ₹ 200 ತಲುಪಿದೆ. ₹ 600ರಿಂದ ₹ 800ಕ್ಕೆ ಮಲ್ಲಿಗೆ ಹಾಗೂ ಕನಕಾಂಬರಗಳು ಜಿಗಿದಿವೆ. ಸುಗಂಧರಾಜ ₹ 60ರಿಂದ ₹ 120ಕ್ಕೆ, ಮರಳೆ ₹ 200ರಿಂದ ₹ 400ಕ್ಕೆ, ಗುಲಾಬಿ 250 ಗ್ರಾಂಗೆ ₹ 30ರಿಂದ ₹ 50ಕ್ಕೆ ಹೆಚ್ಚಾಗಿದೆ’ ಎಂದು ದೇವರಾಜ ಮಾರುಕಟ್ಟೆಯ ಎಂ.ಡಿ.ಫ್ಲವರ್ ಸ್ಟಾಲ್‌ನ ಗಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತರಕಾರಿಗಳಲ್ಲಿ ಈರುಳ್ಳಿಯ ದರ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದರ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿಗೆ ₹ 55ರಿಂದ ₹ 70 ಆಗಿದೆ. ಹಾಪ್‌ಕಾಮ್ಸ್‌ನಲ್ಲಿ ₹ 80 ಇದೆ. ಉಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ₹ 100ರ ಸನಿಹಕ್ಕೆ ಉತ್ತಮ ಗುಣಮಟ್ಟದ ಈರುಳ್ಳಿ ದರ ಇದೆ. ಇದು ಗ್ರಾಹಕರಿಗೆ, ರಸ್ತೆಬದಿ ವ್ಯಾಪಾರಸ್ಥರಿಗೆ, ಹೋಟೆಲ್ ಉದ್ಯಮಿಗಳಿಗೆ ಹೊರೆ ಎನಿಸಿದೆ.

ಬದನೆ ಸಗಟು ಬೆಲೆಯು ₹ 32ಕ್ಕೆ ಜಿಗಿದಿದೆ. ಬದನೆ ಬೆಳೆದ ಬೆಳೆಗಾರರಿಗೆ ಇದರಿಂದ ಉತ್ತಮ ಲಾಭವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 60ಕ್ಕೂ ಹೆಚ್ಚಿದೆ. ಹಾಪ್‌ಕಾಮ್ಸ್‌ನಲ್ಲಿ ₹ 52ಕ್ಕೆ ಕೆ.ಜಿಗೆ ದರ ನಿಗದಿಯಾಗಿದೆ.

ಕೋಳಿ ಮೊಟ್ಟೆ ದುಬಾರಿಯಾಗಿಯೇ ಮುಂದುವರಿದಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ಸಗಟು ದರವು ತಿಂಗಳ ಆರಂಭದಲ್ಲಿ ಒಂದು ಮೊಟ್ಟೆಗೆ ₹ 4.24 ಇತ್ತು. ಈಗ ಇದರ ದರ ₹ 4.45 ಆಗಿದೆ. ಚಳಿಗಾಲ ಆಗಿರುವುದರಿಂದ ಸಹಜವಾಗಿಯೇ ಕೋಳಿಮೊಟ್ಟೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಹೀಗಾಗಿ, ದರ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.