ADVERTISEMENT

ಕುಲಪತಿ ಹುದ್ದೆಗಳು ಮಾರಾಟಕ್ಕಿವೆ: ಮಾಜಿ ಸ್ಪೀಕರ್‌ ಕೃಷ್ಣ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 11:44 IST
Last Updated 28 ಜನವರಿ 2019, 11:44 IST
ಮೈಸೂರಿನಲ್ಲಿ ಸೋಮವಾರ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಮಟ್ಟದ ‘ರಾಷ್ಟ್ರೀಯ ಯುವ ಸಂಸತ್ ಉತ್ಸವ’ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್‌ ಕೃಷ್ಣ ಮಾತನಾಡಿದರು
ಮೈಸೂರಿನಲ್ಲಿ ಸೋಮವಾರ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಮಟ್ಟದ ‘ರಾಷ್ಟ್ರೀಯ ಯುವ ಸಂಸತ್ ಉತ್ಸವ’ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್‌ ಕೃಷ್ಣ ಮಾತನಾಡಿದರು   

ಮೈಸೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳನ್ನು 5 ರಿಂದ 10 ಕೋಟಿ ರೂಪಾಯಿಗೆ ಕೊಂಡುಕೊಳ್ಳಲಾಗಿದೆ ಎಂದು ಮಾಜಿ ಸ್ಪೀಕರ್‌ ಕೃಷ್ಣ ವಿಷಾದದಿಂದ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ವಿ.ವಿ ಎನ್‌ಎಸ್ಎಸ್‌ ಮತ್ತು ನೆಹರು ಯುವಕೇಂದ್ರ, ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ವಿದ್ಯಾಲಯದ ಎನ್‌ಎಸ್‌ಎಸ್‌ ಘಟಕವು ಸೋಮವಾರ ಹಮ್ಮಿಕೊಂಡಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಮಟ್ಟದ ‘ರಾಷ್ಟ್ರೀಯ ಯುವ ಸಂಸತ್ ಉತ್ಸವ’ವನ್ನುಉದ್ಘಾಟಿಸಿ ಅವರು ಮಾತನಾಡಿದರು.

ದೇಶಕಟ್ಟುವ ವಿಶ್ವವಿದ್ಯಾಲಯಗಳು ಇಂದು ಅಧೋಗತಿಗೆ ಇಳಿದಿವೆ. ಅರ್ಹರು ಯಾರೂ ಕುಲಪತಿ ಹುದ್ದೆಗೆ ಏರಲು ಸಾಧ್ಯವೇ ಇಲ್ಲ. ಹುದ್ದೆಯನ್ನು ಹಣ ಕೊಟ್ಟು ಕೊಂಡಮೇಲೆ ಗುಣಮಟ್ಟವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ADVERTISEMENT

ಇದು ರಾಜ್ಯಕ್ಕೆ ಮಾತ್ರ ಮೀಸಲಲ್ಲ. ಇದು ಇಡೀ ದೇಶದ ಎಲ್ಲ ವಿಶ್ವವಿದ್ಯಾಲಯಗಳ ಕತೆ. ಇದರಿಂದಾಗಿಯೇ ವಿಶ್ವದ 200 ಶ್ರೇಷ್ಠವಿಶ್ವವಿದ್ಯಾಲಯಗಳಲ್ಲಿ ದೇಶದ ಒಂದು ವಿಶ್ವವಿದ್ಯಾಲಯವೂ ಸ್ಥಾನ ಪಡೆದುಕೊಳ್ಳಲು ವಿಫಲವಾಗಿದೆ ಎಂದು ವಿಷಾದದಿಂದ ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಈ ರೀತಿಯ ಪರಿಸ್ಥಿತಿ ಇತ್ತು. ಈಗ ಶಿಕ್ಷಣ ಕ್ಷೇತ್ರಕ್ಕೂ ವಿಸ್ತರಿಸಿದೆ. ಕೋಟಿ ಕೋಟಿ ರೂಪಾಯಿ ಹಣ ಹೊಂದಿದ್ದರೆ ಮಾತ್ರ ರಾಜಕೀಯ ಪಕ್ಷಗಳು ಚುನಾವಣೆಗಳಿಗೆ ಟಿಕೆಟ್ ನೀಡುತ್ತವೆ. ಗೆಲ್ಲುವವರಿಗೆ ಟಿಕೆಟ್ ಕೊಡಬೇಕು ಎನ್ನುವುದು ಕೇವಲ ಹೇಳಿಕೆಯ ಮಾತಷ್ಟೇ. ದುಡ್ಡಿದ್ದವರು ನಾಯಕರಾಗುವ ಕಾಲವಿದು. ಆ ಹಣವನ್ನು ಬ್ಯಾಂಕ್‌ ಲೂಟಿ ಮಾಡಿ ಕೂಡಿಟ್ಟರೊ ಕೊಲೆ ಮಾಡಿ ಸಂಪಾದಿಸಿದರೊ ಎನ್ನುವುದು ಯಾರಿಗೂ ಮುಖ್ಯವಾಗಿಲ್ಲ ಎಂದು ಬೇಸರದಿಂದ ನುಡಿದರು.

ಸಾಮಾಜಿಕ ವ್ಯವಸ್ಥೆಯ ಬಗ್ಗೆ ಯುವಕರಿಗೆ ನಂಬಿಕೆ ಹೋಗಿದೆ. ಪ್ರತಿಭೆಗೆ ವೇದಿಕೆ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದರಿಂದಾಗಿ ದೇಶದ ಪ್ರಗತಿ ಕುಂಠಿತವಾಗುತ್ತಿದೆ. ರಾಜಕಾರಣಿಗಳು ಮಾಡಿರುವ ಈ ತಪ್ಪಿನಿಂದ ಜನಸಾಮಾನ್ಯರು ನೋವುಣ್ಣುವಂತಾಗಿದೆ. ಇಲ್ಲವಾದಲ್ಲಿ ಈ ರೀತಿಯ ಅಧೋಗತಿಗೆ ದೇಶ ಹೋಗುತ್ತಿರಲಿಲ್ಲ ಎಂದು ಹೇಳಿದರು.

ಆದರೆ, ಯುವಕರು ನಿರಾಶಾವಾದಿಗಳಾಗಬಾರದು. ಜ್ಞಾನ ಸಂಪಾದಿಸುವ ಪ್ರಯತ್ನ ಕೈಬಿಡಬಾರದು. ಅದು ಅವರನ್ನು ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.

ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಅಧ್ಯಕ್ಷತೆವಹಿಸಿದ್ದರು. ಕಾಂಗ್ರೆಸ್ ಮುಖಂಡ ಪುರುಷೋತ್ತಮ, ಮೈಸೂರು ವಿ.ವಿ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ, ನೆಹರೂ ಯುವಕೇಂದ್ರದ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.