ADVERTISEMENT

ಮೈಸೂರು: ‘ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ದಲ್ಲಿ ವಿಷ್ಣು ಚಿತಾಭಸ್ಮ

ದಶಕದ ಅಡ್ಡಿ ನಿವಾರಣೆ: ₹ 11 ಕೋಟಿ ವೆಚ್ಚದಲ್ಲಿ ನಿರ್ಮಾಣ

ಡಿ.ಬಿ, ನಾಗರಾಜ
Published 15 ಸೆಪ್ಟೆಂಬರ್ 2020, 3:43 IST
Last Updated 15 ಸೆಪ್ಟೆಂಬರ್ 2020, 3:43 IST
ವಿಷ್ಣುವರ್ಧನ್
ವಿಷ್ಣುವರ್ಧನ್   

ಮೈಸೂರು: ‘ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ ನಿರ್ಮಾಣಕ್ಕೆ ಮಂಗಳವಾರ (ಸೆ.15) ಶಂಕುಸ್ಥಾಪನೆ ನೆರವೇರಲಿದೆ. ಸ್ಮಾರಕ ಉದ್ಘಾಟನೆಗೊಳ್ಳುವಾಗ ಇಲ್ಲಿ ವಿಷ್ಣು ಚಿತಾಭಸ್ಮವೂ ಇರಲಿದೆ.

ಕರ್ನಾಟಕ ಪೊಲೀಸ್ ವಸತಿ ನಿಗಮ ಈ ಸ್ಮಾರಕ ಭವನ ನಿರ್ಮಾಣ ಕಾಮಗಾರಿಯ ಮೇಲುಸ್ತುವಾರಿ ಹೊಣೆ ಹೊತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂಬುದನ್ನು ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್‌ ಮೂಲಗಳು ತಿಳಿಸಿವೆ.

₹ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ಭವನ ನಿರ್ಮಾಣಗೊಳ್ಳಲಿದೆ. ಇದರೊಳಗೆ ಗ್ಯಾಲರಿಯೂ ಇರಲಿದೆ. ಇದರ ಮುಂಭಾಗ ನೀರಿನ ಚಿಲುಮೆ ನಿರ್ಮಿಸಲಾಗುವುದು. ಈ ಚಿಲುಮೆಯ ಮುಂಭಾಗವೇ ವಿಷ್ಣುವರ್ಧನ್ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಪ್ರತಿಷ್ಠಾನದ ಹೆಸರು ಬಹಿರಂಗ ಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸ್ಮಾರಕ ಭವನದೊಳಗೆ ತಳ ಮಹಡಿ, ನೆಲಮಹಡಿ ಇರಲಿದೆ. ತಳ ಮಹಡಿಯಲ್ಲಿ ಸಭಾಂಗಣ, ಕಲಾವಿದರ ಕೊಠಡಿ, ಶೌಚಾಲಯಗಳಿರಲಿವೆ. ನೆಲ ಮಹಡಿಯಲ್ಲಿ ಕಲಾವಿದರ ಕೊಠಡಿ, ಶೌಚಾಲಯ, ಲಾಬಿ, ತರಗತಿ ಕೊಠಡಿ, ಡೈರೆಕ್ಟರ್ ಕ್ಯಾಬಿನ್, ಆಫೀಸ್‌ ಸ್ಟಾಫ್ ಕೊಠಡಿ, ಪುರುಷ–ಮಹಿಳೆಯರ ಪ್ರತ್ಯೇಕ ಶೌಚಾಲಯಗಳಿರಲಿವೆ ಎಂದು ಅವರು ಹೇಳಿದರು.

ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣ ಸ್ಥಳ

2010–11ರಲ್ಲೇ ಅನುದಾನ: ವಿಷ್ಣುವರ್ಧನ್ 2009ರ ಡಿ.30ರಂದು ಮೃತಪಟ್ಟಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆದಿತ್ತು.

ವಿಷ್ಣುವರ್ಧನ್‌ ಅಭಿಮಾನಿಗಳು, ಕುಟುಂಬದವರ ಒತ್ತಾಸೆಯ ಮೇರೆಗೆ ಸ್ಮಾರಕ ಭವನ ನಿರ್ಮಾಣಕ್ಕಾಗಿ ಆಗಿನ ಬಿಜೆಪಿ ನೇತೃತ್ವದ ಸರ್ಕಾರ 2010–11ರ ಬಜೆಟ್‌ನಲ್ಲಿ ₹ 11 ಕೋಟಿ ಅನುದಾನವನ್ನು ಮೀಸಲಿರಿಸಿತ್ತು. ಜಾಗವನ್ನು ಘೋಷಿಸಿತ್ತು.

ಆರಂಭದಿಂದಲೂ ವಿಷ್ಣು ಸ್ಮಾರಕಕ್ಕೆ ಜಾಗದ ತಕರಾರು ಕಂಟಕವಾಗಿ ಕಾಡಿತು. ಭಾರತಿ ವಿಷ್ಣುವರ್ಧನ್ ಕೊನೆಗೆ ವಿಷ್ಣು ಅಚ್ಚುಮೆಚ್ಚಿನ ಮೈಸೂರಿನಲ್ಲೇ ಜಾಗ ಕೋರಿದರು. ಮೈಸೂರು ಹೊರ ವಲಯದ ಹಾಲಾಳು ಗ್ರಾಮದ ಬಳಿ ಐದು ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರ ನೀಡಿತು. ಈ ಭೂಮಿಗೂ ಕಂಟಕ ತಪ್ಪಲಿಲ್ಲ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಎಲ್ಲವೂ ಸುಖಾಂತ್ಯಗೊಂಡಿದೆ.

ಅನುದಾನ ಘೋಷಣೆಯಾದ ದಶಕದ ಬಳಿಕ ಶಂಕುಸ್ಥಾಪನೆ ನೆರವೇರುತ್ತಿದ್ದು, ವಿಷ್ಣು ಅಭಿಮಾನಿಗಳು, ಕುಟುಂಬ ವರ್ಗದವರಲ್ಲಿ ಸಂತಸ ವ್ಯಕ್ತವಾಗಿದೆ.

ಶಾಖೆ ಆರಂಭಕ್ಕೆ ಮಾತುಕತೆ

‘ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಶಾಖೆ ಆರಂಭಿಸುವಂತೆ ನಾಲ್ಕೈದು ಬಾರಿ ಮಾತುಕತೆ ನಡೆಸಿದ್ದೇವೆ. ಸಂಸ್ಥೆ ಕೇಂದ್ರದ್ದು. ಜಾಗ ರಾಜ್ಯದ್ದು. ಎರಡೂ ಸರ್ಕಾರ ನಿರ್ಧಾರ ತೆಗೆದುಕೊಂಡು ಸ್ಮಾರಕ ಭವನದ ಬಳಿ ಶಾಖೆ ಆರಂಭಿಸಿದರೆ, ಅಪ್ಪ (ವಿಷ್ಣುವರ್ಧನ್) ಅವರಿಗೆ ಸಾರ್ಥಕ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ನಟ ಅನಿರುದ್ಧ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.