ADVERTISEMENT

ಕುರುಬ ಸಮಾಜದಿಂದ ಸಿದ್ದರಾಮಯ್ಯ ಅವರನ್ನು ಬಹಿಷ್ಕರಿಸಬೇಕಾಗುತ್ತದೆ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 10:12 IST
Last Updated 20 ಜನವರಿ 2021, 10:12 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ‘ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ಸ್ವಾಮೀಜಿಯನ್ನು ಅವಮಾನಿಸಿರುವ ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜದಿಂದ ಬಹಿಷ್ಕರಿಸಬೇಕಾಗುತ್ತದೆ. ಹುಷಾರ್‌ ಸಿದ್ದರಾಮಯ್ಯ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಬುಧವಾರ ಇಲ್ಲಿ ಎಚ್ಚರಿಸಿದರು.

‘ಕುರುಬರ ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಆರ್‌ಎಸ್‌ಎಸ್‌ನಿಂದ ಸ್ವಾಮೀಜಿ ಹಣ ಪಡೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಮನಸ್ಸಿಗೆ ಬೇಸರ ಉಂಟು ಮಾಡಿದೆ. ಇಡೀ ಸಮುದಾಯವು ಸ್ವಾಮೀಜಿಯನ್ನು ಭಯ, ಭಕ್ತಿಯಿಂದ ನೋಡುತ್ತಿದೆ. ಅಂಥವರ ಮೇಲೆ ಒಬ್ಬ ಮಾಜಿ ಮುಖ್ಯಮಂತ್ರಿ, ಸಮುದಾಯದ ವ್ಯಕ್ತಿಯೇ ಆರೋಪ ಮಾಡಿರುವುದು ದುರಂತ.ಅವರು ಮುಖ್ಯಮಂತ್ರಿ ಆಗಿದ್ದೇ ಮಠದಿಂದ. ಈಗ ಅದನ್ನೇ ಮರೆತು ಅವಮಾನ ಮಾಡುತ್ತಿದ್ದಾರೆ’ ಎಂದುಆರೋಪಿಸಿದರು.

‘ಕನಕಗುರು ಪೀಠದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಯಾವುದೇ ಗೌರವ ಇಲ್ಲ. ಎಲ್ಲರ ಎದುರು ಕುರುಬ ಸಮುದಾಯದ ಸ್ವಾಮೀಜಿಯ ಮಾನ ಹರಾಜು ಹಾಕುತ್ತಿದ್ದಾರೆ.ಈ ಮಾತು ಕೇಳಿ ಸ್ವಾಮೀಜಿ ಕುಗ್ಗಿ ಹೋಗಿದ್ದಾರೆ. ಕೂಡಲೇ ಹೇಳಿಕೆ ವಾಪಸ್‌ ಪಡೆಯಿರಿ’ ಎಂದು ಆಗ್ರಹಿಸಿದರು.

ADVERTISEMENT

‘ಎಚ್‌.ವಿಶ್ವನಾಥ್‌, ಕೆ.ಎಸ್‌.ಈಶ್ವರಪ್ಪ, ಎಚ್‌.ಎಂ.ರೇವಣ್ಣ, ವಿರೂಪಾಕ್ಷಪ್ಪ ಅವರ ಮೇಲೆ ಏನು ಬೇಕಾದರೂ ಹೇಳಿ. ಆದರೆ, ಸ್ವಾಮೀಜಿ ಬಗ್ಗೆ ಮಾತನಾಡಬೇಡಿ.ತಾವುಬಹಳ ಸಣ್ಣ ವ್ಯಕ್ತಿ. ಬಿಳಿ ಬಟ್ಟೆ ಧರಿಸಿರುವ ತಮಗೆ ಉತ್ತರ ಕರ್ನಾಟಕದ ಕುರುಬರ ಸಮಸ್ಯೆ ಅರ್ಥವಾಗುತ್ತಿಲ್ಲ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಇಷ್ಟವಿದ್ದರೆ ಹೋರಾಟಕ್ಕೆ ಬನ್ನಿ. ನಾಯಕತ್ವ ವಹಿಸಿಕೊಳ್ಳಿ. ಇಲ್ಲದಿದ್ದರೆ ಸುಮ್ಮನೇ ಕುಳಿತುಕೊಳ್ಳಿ. ಅದನ್ನು ಬಿಟ್ಟು ಸಮುದಾಯದ ಜನರನ್ನು ದಿಕ್ಕು ತಪ್ಪಿಸಬೇಡಿ’ ಎಂದು ಹರಿಹಾಯ್ದರು.

ಟೋಪಿ ಹಾಕಲಿ: ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಿಗುವ ಸಾಧ್ಯತೆಬಗ್ಗೆ ಪ್ರತಿಕ್ರಿಯಿಸಿ, ‘ಬರೀ ಮೈಸೂರು ಉಸ್ತುವಾರಿ ಏಕೆ ರಾಜ್ಯದ ಉಸ್ತುವಾರಿಯನ್ನೇ ಕೊಡಲಿ ಬಿಡಿ. ಮೆಗಾ ಸಿಟಿ ಮಾಡಿ ಮತ್ತಷ್ಟು ಜನರಿಗೆ ಟೋಪಿ ಹಾಕಲಿ. ಅವರ ಮೇಲೆ ಎಷ್ಟು ಕೇಸ್‌ಗಳಿವೆ, ಎಷ್ಟು ದುಡ್ಡು ಹೊಡೆದಿದ್ದಾರೆ ಎಂಬುದು ಹೈಕಮಾಂಡ್‌ಗೆ ಏನು ಗೊತ್ತು?’ ಎಂದು ಸಿಡಿಮಿಡಿಗೊಂಡರು.

ಜೆಡಿಎಸ್‌ನಲ್ಲಿ ಮೂಲೆಗುಂಪಾಗಿರುವ ಶಾಸಕ ಜಿ.ಟಿ.ದೇವೇಗೌಡ‌ ಅವರು ಕಾಂಗ್ರೆಸ್‌ ಸೇರಿ ಏಟು ತಿನ್ನುವಬದಲು ಬಿಜೆಪಿಗೆ ಬಂದರೆಒಳ್ಳೆಯದುಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.