ADVERTISEMENT

‘ಮುಡಾ’ ನಡೆಗೆ ಆಕ್ಷೇಪ; ಹೋರಾಟದ ಎಚ್ಚರಿಕೆ

ಸಂಪನ್ಮೂಲ ನಿಶ್ಚಿತ ಠೇವಣಿ ಹಣವನ್ನು ಅನಗತ್ಯ ಕಾಮಗಾರಿಗಳಿಗೆ ಬಳಸದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 4:52 IST
Last Updated 26 ಜೂನ್ 2021, 4:52 IST

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಈಚೆಗೆ ಕೈಗೊಂಡಿರುವ ತೀರ್ಮಾನಗಳಿಗೆ ಸಾಮಾಜಿಕ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ.

ಭೂಮಿ ನೀಡಿದ ರೈತರಿಗೆ ಪಾವತಿಸಬೇಕಾದ ಪರಿಹಾರ ಹಣವನ್ನು ಬಾಕಿ ಉಳಿಸಿಕೊಂಡು, ಜಿಲ್ಲಾ ಪಂಚಾಯತಿ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ.

‘ರೈತರಿಗೆ ಪ್ರಾಧಿಕಾರವು ₹ 511.75 ಕೋಟಿಬಾಕಿ ಪಾವತಿಸಬೇಕಿದೆ.ಇಷ್ಟೊಂದು ಋಣಭಾರವಿದ್ದರೂ ₹ 768 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಆಪತ್ಕಾಲದ ನಿಧಿ ಎಂಬಂತೆ ಜತನದಿಂದ ಕಾಯ್ದುಕೊಂಡು ಬಂದಿದ್ದ ಸಂಪನ್ಮೂಲ ನಿಶ್ಚಿತ ಠೇವಣಿಯಲ್ಲಿರುವ ₹ 279 ಕೋಟಿಯನ್ನೂ ಬಳಕೆ ಮಾಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಮುಡಾದ ನಗರ ಯೋಜನಾ ನಿವೃತ್ತ ಸಹಾಯಕ ನಿರ್ದೇಶಕ ಹಾಗೂ ಪ‍್ರಾಧಿಕಾರದ ನೌಕರರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್.ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರೈತರಿಗೆ ನ್ಯಾಯಾಲಯದ ಆದೇಶದ ಮೇರೆಗೆ ಪಾವತಿಸಬೇಕಿದ್ದ ಬಾಕಿ ಮೊತ್ತವನ್ನು ಈ ಮೂಲದಿಂದ ಭರಿಸಿದ್ದರೆ ಕನಿಷ್ಠ ಪಕ್ಷ ಬಡ್ಡಿ ಪಾವತಿಸಬೇಕಾದ ಹೊರೆಯಿಂದ ಪಾರಾಗಬಹುದಿತ್ತು. ಆದರೆ, ರೈತರಿಗೆ ಬಾಕಿ ಮೊತ್ತ ಪಾವತಿಸುವ ಬದಲು ಅನಗತ್ಯವಾದ ಕಾಮಗಾರಿಗಳಿಗೆ ತೊಡಗಿಸಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.

‌ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ ಸೆಕ್ಷನ್ 15 (1)ರ ಪ್ರಕಾರ ಅಭಿವೃದ್ಧಿ ನಿಧಿ ಬಳಕೆ ಮಾಡಲು ಸಾಕಷ್ಟು ಹಣ ಪ್ರಾಧಿಕಾರದಲ್ಲಿರಬೇಕು. ಆದರೆ, ಹಣ ಇಲ್ಲದೆಕಾಮಗಾರಿ ಕೈಗೊಳ್ಳುವುದೂ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿದರು.

‘ರೈತರಿಗೆ ಬಾಕಿ ಹಣ ಪಾವತಿಸದೆಇರುವುದರಿಂದ ನ್ಯಾಯಾಲಯದಿಂದ ಆಗಿದಾಂಗ್ಗೆ ಮುಡಾ ಆಯುಕ್ತರ ಕಾರನ್ನು ಜಪ್ತಿ ಮಾಡಲಾಗುತ್ತಿದೆ. ಹೀಗಿದ್ದರೂ, ಪಾಲಿಕೆ ಹಾಗೂಮಂಡ್ಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

ಜನಸಂಗ್ರಾಮ ಪರಿಷತ್‌ನ ರಾಜ್ಯ ಉಪಾಧ್ಯಕ್ಷ ಪ್ರಸನ್ನಕೂಡಇವರ ಹೇಳಿಕೆಯನ್ನು ಬೆಂಬಲಿಸಿದ್ದು, ‘ಒಂದು ವೇಳೆ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದೆಹೋದರೆ ಮುಡಾ ಉಳಿವಿಗಾಗಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಾಧಿಕಾರದ ಅವ್ಯವಹಾರಗಳ ತನಿಖೆಯನ್ನು ಸಿಬಿಐ ಅಥವಾ ಇನ್ನಾವುದೇ ತನಿಖಾ ಸಂಸ್ಥೆಯಿಂದ ನಡೆಸಬೇಕು. ಇಲ್ಲದಿದ್ದಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.