ADVERTISEMENT

ಮೈಸೂರು ಕ್ಷೇತ್ರದಲ್ಲಿ 1 ಗಂಟೆಗೆ ವೇಳೆಗೆ ಶೇ 35.69 ಮತದಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 8:33 IST
Last Updated 18 ಏಪ್ರಿಲ್ 2019, 8:33 IST
   

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ನಡೆದಿಲ್ಲ. ಮಧ್ಯಾಹ್ನ 1 ಗಂಟೆವರೆಗೆ ಶೇ 35.69 ಮತದಾನವಾಗಿದೆ.

ಅದರಲ್ಲೂ ನಗರ ಪ್ರದೇಶದಲ್ಲಿ ಬೆಳಗ್ಗಿನಿಂದಲೇ ಮತದಾನ ಪ್ರಮಾಣ ತೀರಾ ನೀರಸವಾಗಿದೆ. ಬಿಸಿಲಧಗೆ ಹೆಚ್ಚಿದ್ದು ಜನರು ಮತಗಟ್ಟೆಯತ್ತ ಬರಲು ಹಿಂದೇಟು ಹಾಕಿದರು. ಹಲವೆಡೆ ಮತಗಟ್ಟೆಗಳು ಖಾಲಿ‌ ಹೊಡೆಯುತ್ತಿರುವುದರಿಂದ ಮತದಾನ ನೀರಸವಾಗಿದೆ. ಕೆಲವೆಡೆ ಯುವಕರಿಗಿಂತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದದ್ದು ಕಂಡುಬಂತು.

ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಶೇ 7.79ರಷ್ಟು ಹಾಗೂ 11 ಗಂಟೆಗೆ ತುಸು ಚೇತರಿಸಿಕೊಂಡು ಶೇ 19.99 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶೇ 35.69 ಮತದಾನ ಆಗಿತ್ತು.

ADVERTISEMENT

ಕ್ಷೇತ್ರ ವ್ಯಾಪ್ತಿಯ ಮಡಿಕೇರಿ (ಶೇ 46.11), ವಿರಾಜಪೇಟೆ (ಶೇ 46.31), ಪಿರಿಯಾಪಟ್ಟಣ (ಶೇ 38.89), ಹುಣಸೂರು (ಶೇ 39.53), ಚಾಮುಂಡೇಶ್ವರಿ (ಶೇ 27.81), ಕೃಷ್ಣರಾಜ (ಶೇ 29.65), ಚಾಮರಾಜ (ಶೇ 33.24), ನರಸಿಂಹರಾಜ (ಶೇ 29.36) ಮತದಾನವಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೇವಲ ಶೇ 27.81 ಮತದಾನವಾಗಿದೆ. ನಗರ ವ್ಯಾಪ್ತಿಯ ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಮತದಾನವಾಗಿದೆ. ಕೊಡಗಿನಲ್ಲಿ ಬೆಳಿಗ್ಗೆ 7 ರಿಂದಲೇ ಬಿರುಸಿನ ಮತದಾನ ನಡೆಯಿತು. ಬಹುತೇಕ ಕಡೆ ಮತದಾನ ಶಾಂತಿಯುತವಾಗಿತ್ತು.

ಕೊಡಗಿ‌ನ ಮುಕ್ಕೋಡ್ಲು ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿಯೊಬ್ಬರು ಮತದಾರರ ಮಧ್ಯ ಬೆರಳಿಗೆ ಶಾಯಿ ಹಾಕಿ ಲೋಪ ಎಸಗಿದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕ್ಷೇತ್ರದಲ್ಲಿ 2,187 ಮತಗಟ್ಟೆಗಳಿದ್ದು, 18.95 ಲಕ್ಷ ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.